ಹೂಡಿಕೆ ಮಾಡುವ ಮೊದಲು ದೀರ್ಘಾವಧಿ ಪದದ ಅರ್ಥ ನಮಗೆ ಮನದಟ್ಟಾಗಬೇಕು: ಡಾ ಬಾಲಾಜಿ ರಾವ್
ಹಣ ಹೂಡಿದ ನಂತರ ನಾವು ಅವಸರದ ಪವೃತ್ತಿ ತೋರಬಾರದು ಎಂದು ರಾವ್ ಹೇಳುತ್ತಾರೆ. ಹೂಡಿದ ಹಣ ದ್ವಿಗುಣಗೊಳ್ಳಲು ನಾವು ತಾಳ್ಮೆಯಿಂದ ಕಾಯಬೇಕು. ಅದಕ್ಕೆ ಸಮಯ ಹಿಡಿಯುತ್ತದೆ.
ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ಈ ಸಂಚಿಕೆಯಲ್ಲಿ ದೀರ್ಘಾವಧಿ ಹೂಡಿಕೆ ಬಗ್ಗೆ ಮಾತಾಡಿದ್ದಾರೆ. ಈ ಪದದ ಮಹತ್ವ ನಮಗೆ ಅರ್ಥಮಾಡಿಸಲು ಬೆಂಗಳೂರು ಮತ್ತು ರಾಜ್ಯದಾದ್ಯಂತ ಇರುವ ದಶಕಗಳಷ್ಟು ಹಳೆಯ ಮತ್ತು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳನ್ನು ಡಾ ರಾವ್ ಉದಾಹರಿಸುತ್ತಾರೆ. ಈ ಸಂಸ್ಥೆಗಳು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದು ಈಗಲೂ ಅದೇ ಹೆಸರನ್ನು ಉಳಿಸಿಕೊಂಡಿರುವಂತೆ ಮುಂಬರುವ ವರ್ಷಗಳಲ್ಲೂ ಅವು ತಮ್ಮ ಖ್ಯಾತಿಯನ್ನು ಕಾಯ್ದುಕೊಳ್ಳುತ್ತವೆ. ಹಾಗಾಗೇ ಅವುಗಳ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸ ಮತ್ತು ನಂಬಿಕೆ ಇರುತ್ತದೆ. ದೊಡ್ಡ ದೊಡ್ಡ ಉದ್ದಿಮೆ ಮತ್ತು ಕಂಪನಿಗಳ ಖ್ಯಾತಿಯೂ ಇದೇ ತೆರನಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ಅವರು ಹೇಳುವ ತಾತ್ಪರ್ಯವೇನೆಂದರೆ, ಇನ್ಫೋಸಿಸ್, ಟಿಸಿಎಸ್, ಬರ್ಜರ್ ಪೇಂಟ್ಸ್, ಏಶಿಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದ ಕಂಪನಿಗಳಲ್ಲಿ ದೀರ್ಘಾವಧಿಗೆ ಹಣ ಹೂಡಲು ನಮ್ಮಲ್ಲಿ ಹಿಂಜರಿಕೆ ಹುಟ್ಟಲೇಬಾರದು. ಯಾಕೆಂದರೆ ಮುಂದಿನ 20 ಮತ್ತು ಅದಕ್ಕೂ ಹೆಚ್ಚಿನ ವರ್ಷಗಳಲ್ಲಿ ಈ ಸಂಸ್ಥೆಗಳು ಮತ್ತಷ್ಟು ಬೆಳೆಯುತ್ತವೆ ಎಂದು ಡಾ ರಾವ್ ಹೇಳುತ್ತಾರೆ. ದೀರ್ಘಾವಧಿ ಹೂಡಿಕೆ ಕುರಿತ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಅಂತ ಅವರು ಹೇಳುತ್ತಾರೆ,
ಮಾರುತಿ ಸುಜುಕಿ ಸಂಸ್ಥೆಯು 1995ರಲ್ಲಿ ವರ್ಷಕ್ಕೆ ಒಂದು ಲಕ್ಷ ಕಾರುಗಳನ್ನು ಮಾತ್ರ ತಯಾರಿಸುತಿತ್ತು ಮತ್ತು ನಾವು ಬುಕ್ ಮಾಡಿದ ಕಾರಿನ ಡೆಲಿವರಿ ಪಡೆಯಲು 2 ವರ್ಷ ಕಾಯಬೇಕಾಗುತಿತ್ತು. ಆದರೆ, ಈಗ ಅದೇ ಸಂಸ್ಥೆ ತಿಂಗಳಿಗೆ ಒಂದರಿಂದ ಒಂದೂವರೆ ಲಕ್ಷದಷ್ಟು ಕಾರು ಉತ್ಪಾದಿಸುತ್ತದೆ. ಸಮಯ ಕಳೆದಂತೆ ಕಂಪನಿಯೂ ಬೆಳೆದಿದೆ ಮತ್ತು ಉತ್ಪಾದನೆಯೂ 10 ಪಟ್ಟು ಹೆಚ್ಚಾಗಿದೆ. ಇಂಥ ಕಂಪನಿಗಳಲ್ಲಿ ದೀರ್ಘಾವಧಿಗೆ ಹಣ ಹೂಡಿದರೆ ರಿಟರ್ನ್ಸ್ ಹೆಚ್ಚುತ್ತಾ ಹೋಗುತ್ತದೆಯೇ ಹೊರತು ಕಮ್ಮಿಯಾಗದು ಅಂತ ಬಾಲಾಜಿ ರಾವ್ ಹೇಳುತ್ತಾರೆ.
ಹಣ ಹೂಡಿದ ನಂತರ ನಾವು ಅವಸರದ ಪವೃತ್ತಿ ತೋರಬಾರದು ಎಂದು ರಾವ್ ಹೇಳುತ್ತಾರೆ. ಹೂಡಿದ ಹಣ ದ್ವಿಗುಣಗೊಳ್ಳಲು ನಾವು ತಾಳ್ಮೆಯಿಂದ ಕಾಯಬೇಕು. ಅದಕ್ಕೆ ಸಮಯ ಹಿಡಿಯುತ್ತದೆ. 1993 ರಲ್ಲಿ ಇನ್ಫೋಸಿಸ್ ಕಂಪನಿಯ 100 ಶೇರು ಕೊಂಡವರ ಬಳಿ ಈಗ 1,02,400 ಶೇರುಗಳಿವೆಯಂತೆ. ಆಗ 100 ಶೇರುಗಳಲ್ಲಿ ರೂ. 9,500 ಹೂಡಿಕೆ ಮಾಡಿದವರ ಹಣ ಈಗ ರೂ. 18 ಕೋಟಿಗಳಷ್ಟಾಗಿದೆಯಂತೆ! ವಿಶ್ವದ ಯಾವುದೇ ಬ್ಯಾಂಕ್ ನಿಮ್ಮ ಹಣಕ್ಕೆ ಈ ಪಾಟಿ ರಿಟರ್ನ್ಸ್ ನೀಡದು ಎಂದು ಡಾ ರಾವ್ ಹೇಳುತ್ತಾರೆ.
ನಾವು ವ್ಯಾಸಂಗಕ್ಕೆ ಹಲವಾರು ವರ್ಷಗಳನ್ನು ವಿನಿಯೋಗಿಸುವ ಹಾಗೆ ಕಂಪನಿಗಳು ಮತ್ತು ಅವುಗಳ ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು ಅಧ್ಯಯನ ಮಾಡಬೇಕು, ಹೂಡಿಕೆ ವಿಷಯದಲ್ಲಿ ಧಾವಂತ ಸಲ್ಲದು ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.
ಇದನ್ನೂ ಓದಿ: Viral Video: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು; ಶಾಕಿಂಗ್ ವಿಡಿಯೋ ಇಲ್ಲಿದೆ