ಮನೆ ಇಲ್ಲವೆಂದು ಕನ್ಯೆ ಕೊಡುತ್ತಿಲ್ಲ, ನಿವೇಶನ ಕೊಡಿ, ಇಲ್ಲ ದಯಾಮರಣ ಅನುಮತಿ ನೀಡಿ: ಜನತಾ ದರ್ಶನದಲ್ಲಿ ವ್ಯಕ್ತಿ ಅಳಲು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಓರ್ವ ವ್ಯಕ್ತಿ ಹೈಡ್ರಾಮ ಸೃಷ್ಠಿಸಿದ್ದಾನೆ.
ಚಾಮರಾಜನಗರ ಸೆ.25: ರಾಜ್ಯಾದ್ಯಂತ ಸೋಮವಾರ ಜನತಾ ದರ್ಶನ (Janata Darshana) ಕಾರ್ಯಕ್ರಮ ನಡೆದಿದೆ. ಅದರಂತೆ ಚಾಮರಾಜನಗರದ (Chamrajnagar) ಜಿಲ್ಲಾಧಿಕಾರಿ ಕಚೇರಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜನತಾ ದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಓರ್ವ ವ್ಯಕ್ತಿ ಹೈಡ್ರಾಮ ಸೃಷ್ಠಿಸಿದ್ದಾನೆ. ಈತನಿಗೆ ಸರ್ಕಾರದಿಂದ ನಿಗದಿಯಾಗಿದ್ದ ಮನೆ ಇನ್ನು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಜನತಾ ದರ್ಶನಕ್ಕೆ ಬಂದು ನನಗೆ ಮನೆ ಕರುಣಿಸಿ, ಇಲ್ಲ ದಯಾಮರಣ ನೀಡಿ ಎಂದು ಪಟ್ಟು ಹಿಡಿದಿದ್ದನು.
40 ವರ್ಷ ಆದರೂ ನನಗೆ ಮದುವೆ ಆಗಿಲ್ಲ. ಮದುವೆಗೆ ಕನ್ಯೆ ಕೊಡಬೇಕು ಅಂದರೇ ಪೋಷಕರು ಮನೆ ಇದೆಯಾ ಎಂದು ಪ್ರಶ್ನಿಸುತ್ತಾರೆ. ಮನೆ ಇಲ್ಲದೆ ಮದುವೆ ಆದರೆ ಹೆಂಡತಿನ ಹೇಗ ಸಾಕುತ್ತಿಯಾ? ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ನನಗೆ ಮನೆ ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ ಎಂದು ಅಳಲು ತೋಡಿಕೊಂಡಿದ್ದಾನೆ. ಇಷ್ಟೇ ಅಲ್ಲದೇ ನಾನು ಸತ್ತ ಮೇಲೆ ನನ್ನ ಹೂಳುವುದಕ್ಕಾದರೂ ಒಂದು ಜಾಗ ಕೊಡಿ ಎಂದು ಮನವಿ ಮಾಡಿದ್ದಾನೆ. ವ್ಯಕ್ತಿಯ ಮಾತು ಕೇಳಿ ವೇದಿಕೆಯಲ್ಲಿದ್ದ ಸಚಿವರು, ಶಾಸಕರು ಮತ್ತು ಮಹಿಳಾ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ತಕ್ಷಣವೇ ಅಧಿಕಾರಿಗಳು ವ್ಯಕ್ತಿಯನ್ನ ಆಚೆ ಕರೆದುಕೊಂಡು ಹೋದರು.