ಪತಿಯ ವೀರಮರಣದ ನೋವಿನಲ್ಲೂ ದೇಶಸೇವೆ ಬಿಡಲಿಲ್ಲ: ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ರಾಜ್ಯಪಾಲೆ ಸುಧಾ ಯಾದವ್ ಅವರ ದೇಶ ಸೇವೆಯನ್ನು ಶ್ಲಾಘಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡ ನಂತರವೂ, ಅವರು ಭಾರತ ಮಾತೆಗಾಗಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ಸಂಸತ್ತಿನಲ್ಲಿ ಮತ್ತು ಕರ್ನಾಟಕದ ಜನರಿಗಾಗಿ ಅವರ ಕೊಡುಗೆಯನ್ನು ಪ್ರಧಾನಿ ಎತ್ತಿ ತೋರಿಸಿದರು.
ಬೆಂಗಳೂರು, ನ.13: ರಾಜಧಾನಿ ಬೆಂಗಳೂರಿನ ಐಐಎಂಬಿ ಸಭಾಂಗಣದಲ್ಲಿ ಇಂದು ನಡೆದ ನಮ್ಮ ಮೆಟ್ರೋ ಪಿಂಕ್ ಲೈನ್ ಹಾಗೂ ವಿವಿಧ ರೈಲ್ವೆ ಯೋಜನೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ರಾಜ್ಯಪಾಲೆ ಡಾ. ಸುಧಾ ಯಾದವ್ ಅವರ ರಾಷ್ಟ್ರಸೇವೆ ಹಾಗೂ ವೈಯಕ್ತಿಕ ಬಲಿದಾನವನ್ನು ವಿಶೇಷವಾಗಿ ಸ್ಮರಿಸಿ ಕೊಂಡಾಡಿದ್ದಾರೆ. ರಾಜ್ಯಪಾಲೆಯಾಗಿ ಪ್ರಧಾನಿಯವರೊಂದಿಗೆ ಇಂದು ಮೊದಲ ಬಾರಿಗೆ ವೇದಿಕೆ ಹಂಚಿಕೊಂಡ ಡಾ. ಸುಧಾ ಯಾದವ್ ಅವರ ಬದುಕಿನ ಸ್ಪೂರ್ತಿದಾಯಕ ಹಾದಿಯನ್ನು ಪ್ರಧಾನಿ ಮೋದಿ ಸಭೆಯ ಮುಂದಿಟ್ಟರು. ರಾಜ್ಯಪಾಲೆ ಸುಧಾ ಯಾದವ್ ಅವರನ್ನು ಕುರಿತು ಮಾತನಾಡುತ್ತಾ ಪ್ರಧಾನಿ ಮೋದಿ ಭಾವನಾತ್ಮಕವಾಗಿ ಮಾತನಾಡಿದರು. “ಇಂದು ನಮ್ಮ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ನನಗೆ ಮೊದಲ ಬಾರಿಗೆ ದೊರೆತಿದೆ. ಬಹುಶಃ ಕರ್ನಾಟಕದ ಜನತೆಗೆ ಅವರ ಸಂಪೂರ್ಣ ಪರಿಚಯ ಇನ್ನೂ ಆಗಿರಲಿಕ್ಕಿಲ್ಲ” ಎಂದು ಪ್ರಧಾನಿ ಹೇಳಿದರು. “ಆದರೆ, ರಾಷ್ಟ್ರಸೇವೆ ಮತ್ತು ದೇಶದ ಬಗೆಗಿನ ಸಮರ್ಪಣಾ ಭಾವ ಎಂದರೆ ಏನು ಎಂಬುದನ್ನು ಅವರ ಜೀವನದಿಂದ ಹಾಗೂ ಅವರ ಕುಟುಂಬದ ಬದುಕಿನಿಂದ ನಾವು ಕಲಿಯಬಹುದು” ಎಂದು ಬಣ್ಣಿಸಿದರು. “ಕಾರ್ಗಿಲ್ ಯುದ್ಧ ನಡೆಯುತ್ತಿದ್ದ ಸಂಕಷ್ಟದ ಸಂದರ್ಭದಲ್ಲಿ ಅವರ ಪತಿ ದೇಶಕ್ಕಾಗಿ ಹೋರಾಡುತ್ತಾ ವೀರಮರಣವನ್ನಪ್ಪಿದರು. ಅಂತಹ ಅಪಾರ ನೋವಿನಲ್ಲೂ, ತಮ್ಮ ಪತಿಯ ಸ್ಮರಣೆಯಲ್ಲಿ ಭಾರತಮಾತೆಯ ಸೇವೆ ಮಾಡುವ ಸಂಕಲ್ಪವನ್ನು ಸುಧಾ ಅವರು ಎಂದಿಗೂ ಕೈಬಿಡಲಿಲ್ಲ. ಅಂದಿನಿಂದ ಇಂದಿನವರೆಗೂ ಅಷ್ಟೊಂದು ಸೇವಾ ಮನೋಭಾವದಿಂದಲೇ ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದರು. “ಹಲವು ವರ್ಷಗಳ ಕಾಲ ಸಂಸತ್ತಿನಲ್ಲಿ ಸೇವೆ ಸಲ್ಲಿಸಿರುವ ಅವರು, ದೇಶದ ಅನೇಕ ಮಹತ್ವದ ವಿಷಯಗಳ ಕುರಿತು ತಮ್ಮ ಮಾರ್ಗದರ್ಶನ ಮತ್ತು ಅನುಭವವನ್ನು ನೀಡಿದ್ದಾರೆ. ಇಂದು ಕರ್ನಾಟಕದ ನೆಲದಿಂದಲೇ ರಾಜ್ಯದ ಜನರ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಸುಧಾ ಜೀ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ” ಎಂದು ಪ್ರಧಾನಿ ಮೋದಿ ಪ್ರಶಂಸಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್

