AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮನೆಯಲ್ಲಿ ಶಾಕ್ ಕೊಟ್ಟ ಪೊಲೀಸ್​​: ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ, ಕಾರಣವೇನು ಗೊತ್ತಾ?

ಮದುವೆ ಮನೆಯಲ್ಲಿ ಶಾಕ್ ಕೊಟ್ಟ ಪೊಲೀಸ್​​: ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ, ಕಾರಣವೇನು ಗೊತ್ತಾ?

ಜಗದೀಶ ಬಿ.
| Edited By: |

Updated on:Nov 19, 2026 | 10:45 AM

Share

ಪಾವಗಡದಲ್ಲಿ ನಡೆಯಬೇಕಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಂಪತ್ ವಿವಾಹದಲ್ಲಿ ದೊಡ್ಡ ನಾಟಕೀಯ ತಿರುವು ಉಂಟಾಗಿದೆ. ಮದುವೆಗೆ ನಿರಾಕರಿಸಿದ ಸಂಪತ್, ಮಾತ್ರೆಗಳನ್ನು ಸೇವಿಸಿದ್ದಾರೆ. ಈ ಘಟನೆ ತುಮಕೂರು, ಮಡಕಶಿರ ಭಾಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕುಟುಂಬದವರು ಮತ್ತು ವಿವಾಹಕ್ಕೆ ಬಂದವರಲ್ಲಿ ಆತಂಕ ಮೂಡಿಸಿತ್ತು. ಇದೀಗ ಮದುವೆಗೆ ಒಪ್ಪಿ, ತಾಳಿ ಕಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ

ತುಮಕೂರು , ನ.19: ಸಂಭ್ರಮ-ಸಡಗರದಿಂದ ನಡೆಯಬೇಕಿದ್ದ ಮದುವೆ ಮನೆಯಲ್ಲಿ ವರನಾದ ಪೊಲೀಸ್ ಸಿಬ್ಬಂದಿಯೊಬ್ಬರು ತಡರಾತ್ರಿ ಭಾರಿ ಹೈಡ್ರಾಮಾ ಸೃಷ್ಟಿಸಿ ಎರಡೂ ಕುಟುಂಬಗಳಿಗೆ ಶಾಕ್ ನೀಡಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ಪೊಲೀಸ್ ಠಾಣೆಯ ಸಿಬ್ಬಂದಿ ಸಂಪತ್ ಎಂಬುವವರು ತಮ್ಮ ಮದುವೆಯ ಆರತಕ್ಷತೆ ದಿನವೇ ವಿವಾಹಕ್ಕೆ ನಿರಾಕರಿಸಿ ಮಾತ್ರೆ ನುಂಗಿ ಆಸ್ಪತ್ರೆ ಸೇರಿದ್ದು, ಕೊನೆಗೆ ಹಿರಿಯರ ಮಧ್ಯಸ್ಥಿಕೆ ಹಾಗೂ ಮನವೊಲಿಕೆಯ ಬಳಿಕ ಇಂದು ಬೆಳಿಗ್ಗೆ ಸಪ್ತಪದಿ ತುಳಿದಿದ್ದಾರೆ. ಪಾವಗಡ ಠಾಣೆ ಸಿಬ್ಬಂದಿ ಸಂಪತ್ ಅವರ ವಿವಾಹ ಮಹೋತ್ಸವ ನಿಗದಿಯಾಗಿತ್ತು. ಬುಧವಾರ (ನವೆಂಬರ್ 18) ಸಂಜೆ ನೆರೆಯ ಆಂಧ್ರಪ್ರದೇಶದ ಮಡಕಶಿರಾದಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಆರತಕ್ಷತೆ ಆರಂಭಕ್ಕೂ ಮುನ್ನವೇ ಮಂಟಪದಲ್ಲಿ ದಿಢೀರ್ ಉಲ್ಟಾ ಹೊಡೆದ ಸಂಪತ್, ತನಗೆ ಈ ಮದುವೆ ಬೇಡ ಎಂದು ನಿರಾಕರಿಸಿ ಮಾತ್ರೆಗಳನ್ನು ನುಂಗಿ ಅಸ್ವಸ್ಥಗೊಂಡಿದ್ದಾರೆ. ವರನ ಈ ಅನಿರೀಕ್ಷಿತ ನಡೆ ಹಾಗೂ ಹೈಡ್ರಾಮಾದಿಂದ ವಧುವಿನ ಕುಟುಂಬಸ್ಥರು ತೀವ್ರ ಕಂಗಾಲಾದರು. ಆರತಕ್ಷತೆ ಸಂಭ್ರಮದಲ್ಲಿರಬೇಕಾದ ಸಮಯದಲ್ಲಿ ಎರಡೂ ಕುಟುಂಬಗಳು ಆತಂಕದಿಂದ ಆಸ್ಪತ್ರೆಗೆ ಅಲೆದಾಡುವಂತಾಯಿತು. ತಕ್ಷಣವೇ ಸಂಪತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆರಂಭದಲ್ಲಿ ಭಾಷೆಯ ವಿಚಾರಕ್ಕೆ ಈ ಗೊಂದಲ ಉಂಟಾಗಿದೆ ಎಂದು ಹೇಳಲಾಗಿತ್ತಾದರೂ, ವರ ಸಂಪತ್ ಮದುವೆಗೆ ನಿರಾಕರಿಸಲು ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪತ್ ಚೇತರಿಸಿಕೊಂಡ ಬಳಿಕ, ಎರಡೂ ಕುಟುಂಬದ ಹಿರಿಯರು ಸೇರಿ ಸುದೀರ್ಘ ಮಾತುಕತೆ ನಡೆಸಿ ವರನ ಮನವೊಲಿಸುವಲ್ಲಿ ಯಶಸ್ವಿಯಾದರು. ತಡರಾತ್ರಿಯ ಭಾರಿ ಹೈಡ್ರಾಮಾದ ಬಳಿಕ ಮದುವೆಗೆ ಒಪ್ಪಿಕೊಂಡ ಸಂಪತ್, ಇಂದು ಮಡಕಶಿರಾದ ಆಂಜನೇಯ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ವಧುವಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಪ್ತಪದಿ ತುಳಿದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 19, 2026 10:43 AM

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More