ಶಾಂತಿ ಸೌಹಾರ್ದತೆ ಕಾಪಾಡುವಂತೆ ಜಾಗೃತಿ; ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರ ಪಥಸಂಚಲನ

ಶಾಂತಿ ಸೌಹಾರ್ದತೆ ಕಾಪಾಡುವಂತೆ ಜಾಗೃತಿ; ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರ ಪಥಸಂಚಲನ

TV9 Web
| Updated By: shivaprasad.hs

Updated on: Apr 17, 2022 | 6:29 PM

Hubli Violence: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಸದ್ಯ ಹುಬ್ಬಳ್ಳಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ನಗರಕ್ಕೆ ಆಗಮಿಸಿದ್ದಾರೆ.

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಸದ್ಯ ಹುಬ್ಬಳ್ಳಿ (Hubli Violence) ಬೂದಿ ಮುಚ್ಚಿದ ಕೆಂಡವಾಗಿದ್ದು, ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಸಾರ್ವಜನಿಕರು ಶಾಂತಿ ಸೌಹಾರ್ದತೆ ಕಾಪಾಡುವಂತೆ ಜಾಗೃತಿ ಮೂಡಿಸಿದ್ದು, ಹಳೇ ಹುಬ್ಬಳ್ಳಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ​​ ಲಾಬೂರಾಮ್ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಗಿದ್ದು, ಮೂವರು ಡಿಸಿಪಿ, ಓರ್ವ ಎಸ್​ಪಿ, ಇಬ್ಬರು ಎಎಸ್​ಪಿ, 6 ಎಸಿಪಿ, 100ಕ್ಕೂ ಹೆಚ್ಚು ಇನ್ಸ್​ಪೆಕ್ಟರ್​, 300 ಹೆಡ್​ಕಾನ್ಸ್​ಟೇಬಲ್​ಗಳು, ಕೆಎಸ್​ಆರ್​ಪಿಯ 100 ಸಿಬ್ಬಂದಿ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಕೃಷ್ಣಾಪುರ ಓಣಿ, ದಿಡ್ಡಿ ಓಣಿ, ಗಣೇಶಪೇಟೆ, ಕಸಬಾಪೇಟೆ, ದುರ್ಗದಬೈಲ್ ವೃತ್ತದಲ್ಲಿ ಪಥಸಂಚಲನ ನಡೆಸಲಾಗಿದೆ.

ಘಟನೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ನಡೆದು, ದೇವಸ್ಥಾನಗಳು, ಪೊಲೀಸ್ ಠಾಣೆ ಮೇಲಿನ ದಾಳಿ ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮ ಪ್ರಕಟಣೆ‌ಯಲ್ಲಿ ತಿಳಿಸಿದ್ದಾರೆ. ನಿನ್ನೆ ಹಿಂಸಾತ್ಮಕ ದಾಳಿ ಮಾಡಿರುವುದು ಅಕ್ಷಮ್ಯ ಅಪರಾಧ. ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯವಾ ಎಂಬುದರ ಬಗ್ಗೆ ತನಿಖೆ ಮಾಡಲಿ. ಅಶಾಂತಿಯನ್ನುಂಟು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮ ಪ್ರಕಟಣೆ ಮೂಲಕ ಸರ್ಕಾರಕ್ಕೆ ಜೋಶಿ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿಗೆ ನಾಯಕರ ದೌಡು:

ಹುಬ್ಬಳ್ಳಿ: ಹುಬ್ಬಳ್ಳಿಗೆ ಬಿಜೆಪಿ ನಾಯಕರಾದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಶೆಟ್ಟರ್ ಆಗಮಿಸಿದ್ದಾರೆ. ಹುಬ್ಬಳ್ಳಿಯ ಸಕ್ರ್ಯೂಟ್ ಹೌಸ್​ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ‌ ನಡೆಯಲಿದೆ. ಕಮೀಷನರ್ ಲಾಬೂರಾಮ್, ಎಸ್ಪಿ ಕೃಷ್ಣಕಾಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ

‘ಎಸ್​ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ’; ಸಚಿವ ಶ್ರೀರಾಮುಲು ಹೇಳಿಕೆ