ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಬಂದ ಅಭಿಮಾನಿ; ಫೋಟೋ ಕಸಿದುಕೊಂಡ ಪೋಲೀಸರು
ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಪೂಜಾ ಸಂದರ್ಭದಲ್ಲಿ ಭಾರಿ ಹೈಡ್ರಾಮಾವೊಂದು ನಡೆದಿದೆ. ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಬಂದಿದ್ದ ದರ್ಶನ್ ಅಭಿಮಾನಿಯೊಬ್ಬನ ವರ್ತನೆ ಮತ್ತು ಪೊಲೀಸರ ನಡೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಆಷಾಢ ಪೂಜೆಯ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಭಕ್ತರ ಸರತಿ ಸಾಲಿನಲ್ಲಿ ನಿಂತಿದ್ದ ಅಭಿಮಾನಿಯೊಬ್ಬ ನಟ ದರ್ಶನ್ ಅವರ ದೊಡ್ಡ ಭಾವಚಿತ್ರವನ್ನು ಹಿಡಿದುಕೊಂಡು ಬಂದಿದ್ದನು. ದೇವಿಯ ದರ್ಶನಕ್ಕಾಗಿ ಕಾಯುವಾಗ ಆತ ಸಾಲಿನಲ್ಲಿ ನಿಂತೇ ‘ಡಿ ಬಾಸ್’ ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದನು. ಗದ್ದಲ ಎಬ್ಬಿಸುತ್ತಾ ತನ್ನ ಅಭಿಮಾನವನ್ನು ಪ್ರದರ್ಶಿಸುತ್ತಿದ್ದ ಆತನ ನಡೆ ಅಲ್ಲಿದ್ದ ಇತರೆ ಭಕ್ತರಿಗೆ ಮುಜುಗರ ಉಂಟುಮಾಡಿತ್ತು.
ಭಾವಚಿತ್ರ ಕಸಿದುಕೊಂಡ ಪೊಲೀಸರು
ಸರತಿ ಸಾಲಿನಲ್ಲಿ ಭಕ್ತರು ದೇವಿಯ ನಾಮಸ್ಮರಣೆ ಮಾಡುವ ಬದಲು ನಟನ ಜೈಕಾರ ಕೂಗುತ್ತಿರುವುದನ್ನು ಗಮನಿಸಿದ ಭದ್ರತಾ ನಿರತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಆತನ ಬಳಿ ಧಾವಿಸಿದ ಪೊಲೀಸರು, ಆತನ ಕೈಯಲ್ಲಿದ್ದ ದರ್ಶನ್ ಅವರ ಭಾವಚಿತ್ರವನ್ನು ಕಸಿದುಕೊಂಡಿದ್ದಾರೆ.
ಬರಿಗೈಯಲ್ಲಿ ಕಳುಹಿಸಿದ ಖಾಕಿ
ಅಭಿಮಾನಿಯಿಂದ ಫೋಟೋವನ್ನು ವಶಪಡಿಸಿಕೊಂಡ ಪೊಲೀಸರು, ಆತನನ್ನು ಬರಿಗೈಯಲ್ಲಿಯೇ ದೇವಸ್ಥಾನದ ಒಳಗೆ ದರ್ಶನಕ್ಕಾಗಿ ಕಳುಹಿಸಿಕೊಟ್ಟಿದ್ದಾರೆ. ಪವಿತ್ರ ಕ್ಷೇತ್ರಕ್ಕೆ ಬರುವಾಗ ದೇವಸ್ಥಾನದ ಶಿಸ್ತು ಮತ್ತು ನಿಯಮಗಳನ್ನು ಪಾಲಿಸಬೇಕು. ಇತರ ಭಕ್ತರಿಗೆ ತೊಂದರೆ ಕೊಡುವ ಸಾರ್ವಜನಿಕ ಪ್ರದರ್ಶನಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
