ಮೈಸೂರಿನಲ್ಲಿ ತಯಾರಾಗುತ್ತಿದ್ದ ಕನ್ನಡಿಗರ ಹೆಮ್ಮೆಯ ಯೆಜ್ಡಿ ಬೈಕ್ ಮೂರು ಹೊಸ ಅವತಾರಗಳಲ್ಲಿ ಮರುಹುಟ್ಟು ಪಡೆದಿದೆ!

| Updated By: shivaprasad.hs

Updated on: Jan 15, 2022 | 7:38 AM

ಐಡಿಯಲ್ ಜಾವಾ ಸಂಸ್ಥೆ ಹೊಂದಿದ್ದ ಯೆಜ್ಡಿ ಬ್ರ್ಯಾಂಡನ್ನು ಮಹಿಂದ್ರಾ ಒಡೆತನದ ಕ್ಲ್ಯಾಸಿಕ್ ಲೆಜೆಂಡ್ಸ್ ಪಡೆದುಕೊಂಡಿದೆ. ಯೆಜ್ಡಿಯನ್ನು ರೂಪಾಂತರಗೊಳಿಸಿ ಮೂರು ಮಾಡೆಲ್ ಗಳಲ್ಲಿ ಲಾಂಚ್ ಮಾಡಿದೆ. ಅವುಗಳ ವಿನ್ಯಾಸ ನೋಡಿದರೆ, ನೇರವಾಗಿ ಬುಲೆಟ್​ನೊಂದಿಗೆ ಪೈಪೋಟಿಗೆ ಬೀಳುವಂತಿದೆ.

ಕನ್ನಡಿಗರು ಹೆಮ್ಮೆಪಟ್ಟುಕೊಳ್ಳುವ ವಿಷಯವೊಂದನ್ನು ಹೇಳುವುದಿದೆ ಮಾರಾಯ್ರೇ. ಏನು ಗೊತ್ತಾ ಹಿಂದೆ ಪ್ರತಿಷ್ಠೆಯ ಸಂಕೇತವಾಗಿದ್ದ ಯೆಜ್ಡಿ ಮೊಟಾರ್ ಸೈಕಲ್ ಹೊಸ ರೂಪಗಳಲ್ಲಿ ನಮ್ಮೆದಿರು ಪ್ರತ್ಯಕ್ಷವಾಗಿದೆ. ಹೌದು ರೂಪ ಒಂದಲ್ಲ, ಮೂರು. ಒಂದು ಯೆಜ್ಡಿ ರೋಡ್​ಸ್ಟರ್ (Yezdi Roadster), ಯೆಜ್ಡಿ ಸ್ಕ್ರ್ಯಾಂಬ್ಲರ್ (Yezdi Scrambler) ಮತ್ತು ಯೆಜ್ಡಿ ಅಡ್ವೆಂಚರ್ (Yezdi Adventure). ಹೊಸ ತಲೆಮಾರಿನ ಓದುಗರಿಗೆ ಯೆಜ್ಡಿಗೂ ಕನ್ನಡಿಗರಿಗೂ ಎಲ್ಲಿಯ ನಂಟು ಅಂತ ಗೊಂದಲವಾಗುತ್ತಿರಬಹುದು. ಯೆಜ್ಡಿ ಬೈಕ್ ನಮ್ಮ ಮೈಸೂರಿನ ಐಡಿಯಲ್ ಜಾವಾ ಕಂಪನಿಯಲ್ಲಿ ತಯಾರಾಗುತ್ತಿತ್ತು. 60, 70 ಮತ್ತು 80 ರ ದಶಕದಲ್ಲಿ ರಸ್ತೆ ಮೇಲೆ ಕಾಣುತ್ತಿದ್ದ ಬೈಕ್ ಗಳೆಂದರೆ, ಜಾವಾ, ಯೆಜ್ಡಿ ಮತ್ತು ಬುಲೆಟ್. ರಾಜದೂತ್ ಮಾರ್ಕೆಟ್ ಪ್ರವೇಶಿಸಿದ್ದು ಸಹ 70ರ ದಶಕದಲ್ಲಿರಬಹುದು. 100 ಸಿಸಿ ಬೈಕ್​ಗಳ ಭರಾಟೆ ಜೋರಾದ ನಂತರ ಈ ಬೈಕ್ಗಳು ನೇಪಥ್ಯಕ್ಕೆ ಸರಿದವು ಮಾರಾಯ್ರೇ.

ರಾಯಲ್ ಎನ್ಫೀಲ್ಡ್ ಕಂಪನಿಯ ಬುಲೆಟ್ ಸಂಪೂರ್ಣವಾಗಿ ಮರೆಯಾಗಲಿಲ್ಲವಾದರೂ ಅದಕ್ಕೆ ಬೇಡಿಕೆ ಕಡಿಮೆಯಾಗಿಬಿಟ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ಮತ್ತೇ ರೋಡ್​ಗಳ ಮೇಲೆ ರಾರಾಜಿಸುತ್ತಿದೆ. ಐಡಿಯಲ್ ಜಾವಾ ಸಂಸ್ಥೆ ಹೊಂದಿದ್ದ ಯೆಜ್ಡಿ ಬ್ರ್ಯಾಂಡನ್ನು ಮಹಿಂದ್ರಾ ಒಡೆತನದ ಕ್ಲ್ಯಾಸಿಕ್ ಲೆಜೆಂಡ್ಸ್ ಪಡೆದುಕೊಂಡಿದೆ. ಯೆಜ್ಡಿಯನ್ನು ರೂಪಾಂತರಗೊಳಿಸಿ ಮೂರು ಮಾಡೆಲ್ ಗಳಲ್ಲಿ ಲಾಂಚ್ ಮಾಡಿದೆ. ಅವುಗಳ ವಿನ್ಯಾಸ ನೋಡಿದರೆ, ನೇರವಾಗಿ ಬುಲೆಟ್​ನೊಂದಿಗೆ ಪೈಪೋಟಿಗೆ ಬೀಳುವಂತಿದೆ.

ಅಂದಹಾಗೆ ಹೊಸ ಯೆಜ್ಡಿ ಬೈಕ್​ಗಳ ಬೆಲೆಯನ್ನೂ ತಿಳಿದುಕೊಂಡು ಬಿಡುವ ಮಾರಾಯ್ರೇ. ಯೆಜ್ಡಿ ರೋಡ್ಸ್ಟರ್ ಆರಂಭಿಕ ಬೆಲೆ ರೂ. 1.98 ಲಕ್ಷ. ಸ್ಕ್ರ್ಯಾಂಬ್ಲರ್ ಬೆಲೆ ರೂ. 2.04 ಲಕ್ಷ ಮತ್ತು ಅಡ್ವೆಂಚರ್ ಬೆಲೆ ರೂ. 2.09 ಲಕ್ಷದಿಂದ ಅರಂಭವಾಗುತ್ತದೆ. ಇಲ್ಲಿ ಹೇಳಿರುವುದೆಲ್ಲ ಎಕ್ಸ್ ಶೋರೂಮ್ ಬೆಲೆಗಳು.

ನೀವು ಯೆಜ್ಡಿ ಬೈಕ್ ಗಳ ಅಂದಕ್ಕೆ, ಅವುಗಳಲ್ಲಿ ಕಾಣುತ್ತಿರುವ ಧಾಡಸೀತನಕ್ಕೆ ಮರುಳಾಗಿದ್ದರೆ ಕಾಯಬೇಕಾದ ಅವಶ್ಯಕತೆ ಇಲ್ಲ, ಯಾಕೆಂದರೆ ಬುಕಿಂಗ್ ಆರಂಭವಾಗಿದೆ.

ಇದನ್ನೂ ಓದಿ:   ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ