ಶಿಡ್ಲಘಟ್ಟ ಪೌರಾಯುಕ್ತೆಯನ್ನು ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀವ್ ಗೌಡರ ಅವಾಚ್ಯ ನುಡಿಗಳನ್ನು ಖಂಡಿಸಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದರು. ಆದರೆ, ಬಿಜೆಪಿಯ ರಾಜಕೀಯ ಸಂಸ್ಕೃತಿಯನ್ನು ಪ್ರಶ್ನಿಸಿದ ಅವರು, ಮುನಿರತ್ನ ಮತ್ತು ಸಿ.ಟಿ. ರವಿ ಅವರು ಈ ಹಿಂದೆ ನಡೆದುಕೊಂಡಿದ್ದ ಉದಾಹರಣೆಗಳನ್ನು ನೀಡಿ ಪ್ರತಿಪಕ್ಷದ ವಿರುದ್ಧವೂ ಹರಿಹಾಯ್ದರು.
ಬೆಂಗಳೂರು, ಜನವರಿ 15: ಶಿಡ್ಲಘಟ್ಟ ಪೌರಾಯುಕ್ತೆಯನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀವ್ ಗೌಡ ಅಥವಾ ಬೇರೆ ಯಾರೇ ಆಗಿರಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಬೇರೆಯವರನ್ನು ನಿಂದಿಸಲು ಅಥವಾ ಅವಾಚ್ಯ ಶಬ್ದಗಳನ್ನು ಬಳಸಲು ಯಾರಿಗೂ ಹಕ್ಕಿಲ್ಲ ಎಂದರು. ಅಲ್ಲದೆ, ಪಕ್ಷದ ಅಧ್ಯಕ್ಷರು ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಸಂಸ್ಕೃತಿ ಕಲಿಯಬೇಕಿಲ್ಲ. ಮುನಿರತ್ನ, ಸಿ.ಟಿ. ರವಿ ಯಾವ ರೀತಿ ಮಾತನಾಡಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ ಎಂದು ಉಲ್ಲೇಖಿಸಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಸಂಸ್ಕೃತಿ ಇಲ್ಲ ಎಂದು ಟೀಕಿಸಿದರು.
Published on: Jan 15, 2026 12:57 PM
