ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!

Updated on: Oct 07, 2026 | 7:17 PM

ಪ್ರತಿಭಟನೆಯ ವೇಳೆ ಪೊಲೀಸರ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, "ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಕೇವಲ ಅವಕಾಶ ಕೋರಿದ ಸಂಸದರನ್ನು ಅವರು ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಅವರು ನಮ್ಮನ್ನು ಹೀಗೆ ಹಿಂಸಿಸುತ್ತಿದ್ದಾರೆ, ಸಂಸದರ ಮೇಲೆ ಹೂಡೆತ ನಡೆಸುತ್ತಿದ್ದಾರೆ. ಪೊಲೀಸರು ನನ್ನ ಮೈಯೆಲ್ಲಾ ಪರಚಿದ್ದಾರೆ, ನಮ್ಮನ್ನು ನೆಲಕ್ಕೆ ತಳ್ಳಿದ್ದಾರೆ. ಈಗ ನಾವು ಇಲ್ಲಿಂದ ಕದಲುವುದಿಲ್ಲ, ಅವರು ತಮ್ಮ ಪಡೆಗಳನ್ನು ಹಿಂಪಡೆಯಲಿ. ನಾನು ಇಲ್ಲಿಂದ ಜಗ್ಗುವುದಿಲ್ಲ," ಎಂದು ಆಕ್ರೋಶ ಹೊರಹಾಕಿದ್ದಾರೆ.  

ನವದೆಹಲಿ, ಅಕ್ಟೋಬರ್ 7: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಧರಣಿ ನಡೆಸಲು ಜಂತರ್ ಮಂತರ್‌ಗೆ ತೆರಳುತ್ತಿದ್ದ ‘ಇಂಡಿಯಾ’ ಮೈತ್ರಿಕೂಟದ ವಿರೋಧ ಪಕ್ಷದ ಸಂಸದರನ್ನು ದೆಹಲಿ ಪೊಲೀಸರು ಭಾರಿ ಭದ್ರತಾ ತಡೆಗೋಡೆಗಳನ್ನು ಹಾಕಿ ತಡೆದಿದ್ದರಿಂದ ದೆಹಲಿಯಲ್ಲಿ ಹೈಡ್ರಾಮಾ ನಡೆದಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದು ಪ್ರತಿಭಟನಾ ಸ್ಥಳದಿಂದ ಕರೆದೊಯ್ಯಲಾಯಿತು. ಮತ್ತೊಂದೆಡೆ, ಜಂತರ್ ಮಂತರ್‌ಗೆ ಹೋಗುವ ರಸ್ತೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಮಹಿಳಾ ಸಂಸದರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ ನಂತರ, ಪೊಲೀಸರು ಪ್ರಿಯಾಂಕಾ ಗಾಂಧಿ ಅವರನ್ನು ಬಲವಂತವಾಗಿ ಸ್ಥಳದಿಂದ ತೆರವುಗೊಳಿಸಿದರು.

ದೆಹಲಿಯ ಜಂತರ್ ಮಂತರ್​​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಕೂಡ ಇಬ್ಬರನ್ನೂ ವಶಕ್ಕೆ ಪಡೆದಿದ್ದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದರು. ಪೊಲೀಸರು ವಶಕ್ಕೆ ಪಡೆಯಲು ಬಂದಾಗ ರಸ್ತೆಯ ಮೇಲೇ ಸಂವಿಧಾನದ ಪ್ರತಿಯನ್ನು ಹಿಡಿದು ಮಲಗಿದ ಪ್ರಿಯಾಂಕಾ ಗಾಂಧಿ ಮತ್ತಿತರ ಮಹಿಳಾ ಕಾಂಗ್ರೆಸ್ ಸಂಸದರು ತಮ್ಮ ಧರಣಿ ಮುಂದುವರೆಸಿದರು. ಆದರೂ ಪೊಲೀಸರು ಪ್ರಿಯಾಂಕಾ ಗಾಂಧಿಯನ್ನು ಎಬ್ಬಿಸಿಕೊಂಡು, ಎಳೆದುಕೊಂಡು ಹೋಗಿ ಪೊಲೀಸ್ ಬಸ್​​ನೊಳಗೆ ತುಂಬಿಸಿಕೊಂಡಿದ್ದಾರೆ. ಈ ವೇಳೆ ತಮ್ಮನ್ನು ವಶಕ್ಕೆ ಪಡೆಯಲು ಬಂದ ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮನ್ನು ನೆಲಕ್ಕೆ ದೂಡಿ, ಮೈಯೆಲ್ಲಾ ಪರಚಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More