ತನ್ನಮ್ಮನ ಭವಿಷ್ಯದಂತೆ ಅಪ್ಪು ಬಹಳ ಕೀರ್ತಿವಂತನಾದ, ಆದರೆ ಅದರ ಶಿಖರದಲ್ಲಿರುವಾಗಲೇ ನಮ್ಮನ್ನಗಲಿದ: ಭಗವಾನ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 09, 2021 | 12:25 AM

ಆಸ್ಪತ್ರೆಯ ನರ್ಸ್ ಆಗಷ್ಟೇ ಹುಟ್ಟಿದ ಅಪ್ಪು ಅವರನ್ನು ಭಗವಾನ್ ಕೈಗಿಟ್ಟು ಅಣ್ಣಾವ್ರಿಗೆ ಫೋನ್ ಮಾಡಿ ತಿಳಿಸುವಂತೆ ಹೇಳಿದ ಬಳಿಕ ಭಗವಾನ್ ಅವರು ಫೋನ್ ಮಾಡಲಾಗಿ, ಮೈಸೂರಿನಲ್ಲಿದ್ದ ಡಾ ರಾಜ್ ಕಾರಿನಲ್ಲಿ ಚೆನೈಗೆ ದೌಡಾಯಿಸಿದರಂತೆ.

70 ಮತ್ತು 80 ರ ದಶಕದ ಯಶಸ್ವೀ ನಿರ್ದೇಶಕ ಜೋಡಿ ದೊರೈ-ಭಗವಾನ್ ಮತ್ತು ಡಾ ರಾಜಕುಮಾರ್ ಅವರ ಕುಟುಂಬದ ನಡುವೆ ಅನೋನ್ಯ ಸಂಬಂಧವಿತ್ತು, ಈಗಲೂ ಇದೆ. ಆದರೆ, ಈಗ ಡಾ ರಾಜ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ದೊರೈ ಈಗ ನಮ್ಮೊಂದಿಗಿಲ್ಲ. ಪುನೀತ್ ರಾಜಕುಮಾರ್ ಭಗವಾನ್ ಅವರು ಎತ್ತಿ ಆಡಿಸಿದ ಮಗು. ಅಪ್ಪು ಅವರ 11ನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಗವಾನ್ ಅವರು ಪುನೀತ್ ಹುಟ್ಟಿದ ಸಂದರ್ಭವನ್ನು ಮೆಲಕು ಹಾಕಿದರು. ಅಪ್ಪು ಹುಟ್ಟಿದ್ದು ಚೆನೈನ ಕಲ್ಯಾಣಿ ಆಸ್ಪತ್ರೆಯಲ್ಲಿ, ಅವರೊಬ್ಬರೇ ಅಲ್ಲ, ಡಾ ರಾಜ್ ದಂಪತಿಗಳ ಎಲ್ಲ ಐವರು ಮಕ್ಕಳು ಮತ್ತು ಭಗವಾನ್ ಅವರ ಮಕ್ಕಳು ಸಹ ಹುಟ್ಟಿದ್ದು ಅದೇ ಆಸ್ಪತ್ರೆಯಲ್ಲಿ. ಅಪ್ಪು ಹುಟ್ಟಿದ ದಿನದಂದು ಡಾ ರಾಜ್ ‘ಮಯೂರ’ ಚಿತ್ರದ ಶೂಟ್ನಲ್ಲಿದ್ದರೆ ಭಗವಾನ್ ಅವರು ಪಾರ್ವತಮ್ಮನವರ ಜೊತೆ ಆಸ್ಪತ್ರೆಯಲ್ಲಿದ್ದರಂತೆ.

ಆಸ್ಪತ್ರೆಯ ನರ್ಸ್ ಆಗಷ್ಟೇ ಹುಟ್ಟಿದ ಅಪ್ಪು ಅವರನ್ನು ಭಗವಾನ್ ಕೈಗಿಟ್ಟು ಅಣ್ಣಾವ್ರಿಗೆ ಫೋನ್ ಮಾಡಿ ತಿಳಿಸುವಂತೆ ಹೇಳಿದ ಬಳಿಕ ಭಗವಾನ್ ಅವರು ಫೋನ್ ಮಾಡಲಾಗಿ, ಮೈಸೂರಿನಲ್ಲಿದ್ದ ಡಾ ರಾಜ್ ಕಾರಿನಲ್ಲಿ ಚೆನೈಗೆ ದೌಡಾಯಿಸಿದರಂತೆ. ಆ ಸಂದರ್ಭದಲ್ಲಿ ಪಾರ್ವತಮ್ಮನವರು ಭಗವಾನ್ ಅವರಿಗೆ, ‘ಪುನೀತ್ ಹುಟ್ಟಿದಾಕ್ಷಣ ನಿನ್ನ ಕೈಸೇರಿದ್ದಾನೆ, ಮುಂದೆ ಅವನು ಬಹಳ ಕೀರ್ತಿವಂತನಾಗಲಿದ್ದಾನೆ,’ ಎಂದರಂತೆ.

ಅವರು ನುಡಿದ ಭವಿಷ್ಯ ನಿಜವಾಯಿತು ಆದರೆ, ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ನಮ್ಮನ್ನು ಅಗಲಿದ್ದಾನೆ, ಅವನು ಇಷ್ಟು ಬೇಗ ಹೋಗಿಬಿಡ್ತಾನೆ ಅಂದುಕೊಂಡಿರಲಿಲ್ಲ ಎಂದು ಭಗವಾನ್ ಹೇಳಿದರು.

ತನ್ನ ತಂದೆ-ತಾಯಿಗಳ ಹಾಗೆ ಪುನೀತ್ ಸಹ ಅಸಂಖ್ಯಾತ ಜನರಿಗೆ ನಿಸ್ವಾರ್ಥ ಮನೋಭಾವದೊಂದಿಗೆ ಸಹಾಯ ಮಾಡಿದ್ದಾನೆ. ಬಲಗೈ ಮಾಡಿದ ದಾನ ಎಡಗೈಗೂ ಗೊತ್ತಾಗಬಾರದು ಅನ್ನುವ ಹಾಗೆಯೇ ಅವನು ಸಹಾಯ ಮಾಡಿದ್ದಾನೆ, ಎಂದು ಭಗವಾನ್ ಹೇಳಿದರು.

ಹಾಗೆಯೇ ಮಹಾಭಾರತದಲ್ಲಿ ಕೃಷ್ಣ ಹೇಳಿದ ಮಾತನ್ನು ಸಹ ಅವರು ಉಲ್ಲೇಖಿಸಿದರು. ಒಬ್ಬ ವ್ಯಕ್ತಿ ಸತ್ತರೂ ಅವನು ಜೀವಿತಾವಧಿಯಲ್ಲಿ ಮಾಡಿದ ಒಳ್ಳೆಯ ಕಾರ್ಯಗಳ ಮೂಲಕ ಜೀವಂತವಾಗಿರುತ್ತಾನೆ, ಅಪ್ಪು ಅಜರಾಮರ ಎಂದು ಅವರು ಹೇಳಿದರು

ಪುನೀತ್ ಅವರಿಗೆ ಪದ್ಮಶ್ರೀ ಅಲ್ಲ ಅಮರಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಬೇಕು ಎಂದು ಭಗವಾನ್ ಹೇಳಿದರು.

ನೀವು ವಿಡಿಯೋನಲ್ಲಿ ಗಮನಿಸುತ್ತಿರುವ ಹಾಗೆ ಒಬ್ಬ ವ್ಯಕ್ತಿ ಪದೇಪದೆ ಬಂದು ಭಗವಾನ್ ಅವರನ್ನು ಡಿಸ್ಟರ್ಬ್ ಮಾಡುತ್ತಾರೆ. ಕೆಮೆರಾನಲ್ಲಿ ತಾನೂ ಸೆರೆಯಾಗಬೇಕು ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ಅವರಿಗಿತ್ತು ಅಂತ ಕಾಣಿಸುತ್ತದೆ. ಅವರು ಹೇಳುವ ಮಾತಿಗೆ ಭಗವಾನ್ ಸೊಪ್ಪೇ ಹಾಕುತ್ತಿಲ್ಲ, ಆದರೂ ಈ ಮನಷ್ಯ ಮಾತುಮಾತಿಗೆ ಪ್ರತ್ಯಕ್ಷನಾಗುತ್ತಾರೆ!

ಅಧಿಕಪ್ರಸಂಗಿತನದ ಪರಮಾವಧಿ ಇದು!

ಇದನ್ನೂ ಓದಿ:   ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜಕುಮಾರ್​ಗೆ ಇಂದು ಹೊನ್ನಾಳಿಯಲ್ಲಿ ಸಂಗೀತ ನಮನ, ನೇತ್ರದಾನ ವಾಗ್ದಾನ