WPL 2026: ನಾಲ್ಕೇ ನಾಲ್ಕು ರನ್; ಶತಕದಂಚಿನಲ್ಲಿ ಎಡವಿದ ಸ್ಮೃತಿ ಮಂಧಾನ
Smriti Mandhana WPL: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ RCB ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ನಾಯಕಿ ಸ್ಮೃತಿ ಮಂಧಾನಾ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ, ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಅವರ ಜವಾಬ್ದಾರಿಯುತ ಆಟವು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಮಹಿಳಾ ಪ್ರೀಮಿಯರ್ ಲೀಗ್ನ ನಾಲ್ಕನೇ ಆವೃತ್ತಿಯಲ್ಲಿ ಆರ್ಸಿಬಿ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕಿ ಸ್ನೃತಿ ಮಂಧಾನ 96 ರನ್‌ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಕೇವಲ 4 ರನ್‌ಗಳಿಂದ ತಮ್ಮ ಚೊಚ್ಚಲ ಡಬ್ಲ್ಯುಪಿಎಲ್ ಶತಕದಿಂದ ವಂಚಿತರಾದರು.
166 ರನ್‌ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸ್ಮೃತಿ, ಜಾರ್ಜಿಯಾ ವಾಲ್ ಜೊತೆ ಶತಕದ ಜೊತೆಯಾಟ ಕಟ್ಟಿದರು. ಹಾಗೆಯೇ ಅರ್ಧಶತಕವನ್ನು ಸಹ ಪೂರೈಸಿದರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಸ್ಮೃತಿ ಶತಕದತ್ತ ಹೆಜ್ಜೆ ಹಾಕಿದರು. ಸ್ಮೃತಿಗೆ ಶತಕ ಬಾರಿಸುವ ಅವಕಾಶವೂ ಇತ್ತು. ಆದರೆ ಅಶ್ವನಿ ಅವರ ಬೌಲಿಂಗ್ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿದ ಸ್ಮೃತಿ ಪಾಯಿಂಟ್ನಲ್ಲಿ ನಿಂತಿದ್ದ ಲೂಸಿ ಹ್ಯಾಮಿಲ್ಟನ್ಗೆ ಕ್ಯಾಚ್ ನೀಡಿದರು.
ಲೂಸಿ ಹ್ಯಾಮಿಲ್ಟನ್ ತಮ್ಮ ಬಲಕ್ಕೆ ಜಿಗಿದು ಅತ್ಯದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ನ ಮೊಟ್ಟ ಮೊದಲ ಶತಕ ಬಾರಿಸುವುದನ್ನು ತಪ್ಪಿಸಿದರು. ಅಂತಿಮವಾಗಿ ಸ್ಮೃತಿ 61 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 96 ರನ್ ಬಾರಿಸಿದರು.

