ಮಂಡ್ಯ: ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಿಸುವ ಅಕ್ಕಿ ರೈಸ್​ಮಿಲ್ ಪಾಲಾಗುತ್ತಿದೆ!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2021 | 12:59 AM

ಈ ಮಿಲ್ಲಿನ ಮಾಲೀಕ ಪಡಿತರ ಅಂಗಡಿಗಳಿಂದಲೋ ಅಥವಾ ನೇರವಾಗಿ ಗೋದಾಮಿನಿಂದಲೋ ಮೂಟೆಗಟ್ಟಲೆ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಾನೆ. ಅವನಿಗೆ ಈ ಅಕ್ಕಿ ಬಹಳ ಕಡಿಮೆ ಬೆಲೆಗೆ ಸಿಗುತ್ತದೆ.

ಬಡಜನರು ಹೊಟ್ಟೆತುಂಬ ಊಟ ಮಾಡಿ ಕಣ್ತುಂಬ ನಿದ್ರೆ ಮಾಡಲಿ ಅಂತ ಸರ್ಕಾರ ಅವರಿಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಒಂದು ರೂಪಾಯಿಗೆ ಒಂದು ಕೇಜಿಯಂತೆ ಅಕ್ಕಿ ಒದಗಿಸುತ್ತದೆ. ಪಡಿತರ ಅಂಗಡಿಯಲ್ಲಿ (ನ್ಯಾಯ ಬೆಲೆ ಅಂಗಡಿ) ಈಗ ಒಂದು ಕೆಜಿ ಅಕ್ಕಿಯ ಬೆಲೆ ಎಷ್ಟಿದೆ ಎನ್ನುವುದರ ಬಗ್ಗೆ ನಮ್ಮಲ್ಲಿ ಖಚಿತ ಮಾಹಿತಿ ಇಲ್ಲವಾದರೂ ಅದು ನಾಮಿನಲ್ ದರಕ್ಕೆ ಸಿಗೋದಂತೂ ಸತ್ಯ. ಅದರೆ, ಪಡಿತರ ಕಾರ್ಡ್ ಹೊಂದಿರುವವರು ಅಕ್ಕಿ ಸಿಕ್ಕಿಲ್ಲ ಅಂತ ದೂರುವುದನ್ನು ನಾವು ಕೇಳಿಸಿಕೊಳ್ಳುತ್ತಿರುತ್ತೇವೆ. ಕೆಲವು ಕಡೆ ಜನರಿಗೆ ಅಕ್ಕಿ ಸಿಕ್ಕರೂ ಕೇವಲ ಒಂದೆರಡು ಕೇಜಿ ಮಾತ್ರ ಕೊಟ್ಟಿದ್ದಾರೆ ಅಂತ ಹೇಳುತ್ತಾರೆ. ಪ್ರತಿಯೊಂದು ಪಡಿತರ ಅಂಗಡಿಗೆ ಅಲ್ಲಿನ ಪಡಿತರ ಕಾರ್ಡುಗಳ ಅಧಾರದ ಮೇಲೆ ಸರ್ಕಾರ ಅಕ್ಕಿಯ ದಾಸ್ತಾನು ಸರಬರಾಜು ಮಾಡುತ್ತದೆ. ಹಾಗಾದರೆ, ಬಡುವರ ಪಾಲಿನ ಅಕ್ಕಿ ಹೋಗೋದೆಲ್ಲಿಗೆ?

ಇಲ್ಲಿದೆ ನೋಡಿ ಉತ್ತರ. ಮಂಡ್ಯ ಪೊಲೀಸ್, ನಗರದಲ್ಲಿರುವ ಲಕ್ಷ್ಮಿದೇವಿ ಹೆಸರಿನ ರೈಸ್ ಮಿಲ್ಲೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ನೂರಾರು ಮೂಟೆ ಪಡಿತರ ಅಕ್ಕಿಯನ್ನು ಜಪ್ತು ಮಾಡಿದ್ದಾರೆ.

ಈ ಮಿಲ್ಲಿನ ಮಾಲೀಕ ಪಡಿತರ ಅಂಗಡಿಗಳಿಂದಲೋ ಅಥವಾ ನೇರವಾಗಿ ಗೋದಾಮಿನಿಂದಲೋ ಮೂಟೆಗಟ್ಟಲೆ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಾನೆ. ಅವನಿಗೆ ಈ ಅಕ್ಕಿ ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಆ ಕಳ್ಳ ವ್ಯವಹಾರದಲ್ಲಿ ಪಡಿತರ ಅಂಗಡಿಗಳನ್ನು ನಡೆಸುವವರು, ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುತ್ತಾರೆ ಅನ್ನೋದರಲ್ಲಿ ಸಂದೇಹವೇ ಇಲ್ಲ.

ಇವರಿಂದ ಅಕ್ಕಿ ಕೊಳ್ಳುವ ರೈಸ್ ಮಿಲ್ ಮಾಲೀಕ ಅದಕ್ಕೆ ತನ್ನ ಮಿಲ್ನಲ್ಲಿ ಪಾಲಿಶ್ ಮಾಡಿ ವಿದೇಶಳಿಗೆ ರಫ್ತು ಮಾಡುತ್ತಾನೆ. ತಾಜ್ ಮಹಲ್ ಮತ್ತು ರಾಯಲ್ ಬ್ರ್ಯಾಂಡ್​ಗಳ ಹೆಸರಿನಲ್ಲಿ ಅವನು ಅಕ್ಕಿ ಮಾರುತ್ತಿದ್ದಾನೆ. ಮಿಲ್ಲಿನ ಮಾಲೀಕ ಭತ್ತ ನಾಟಿದವನಲ್ಲ ಅಥವಾ ನಾಟಿ ಅಕ್ಕಿ ಬೆಳೆದ ರೈತನಿಂದ ಖರೀದಿಸಿದವನೂ ಅಲ್ಲ.

ಪಕ್ಕಾ ಖದೀಮ ಅವನು. ಬಡವರ ಪಾಲಿನ ಅಕ್ಕಿಯನ್ನ ಕದ್ದು ಬೇರೆ ದೇಶಗಳಿಗೆ ಭಾರೀ ಲಾಭಕ್ಕೆ ಮಾರುತ್ತಾನೆ. ಅವನ ಆದಾಯ ದಿನೇದಿನೆ ಹೆಚ್ಚಿದರೆ, ಬಡವ ಮಾತ್ರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕಿಕೊಂಡು ಮಲಗುತ್ತಾನೆ! ಮೇರಾ ದೇಶ್ ಮಹಾನ್!!

ಇದನ್ನೂ ಓದಿ:   ಝೂಮ್​ ವಿಡಿಯೋ ಕಾಲ್​ನಲ್ಲಿ 900ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿದ ವಿಧಾನಕ್ಕೆ ವಿಶಾಲ್​ ಗರ್ಗ್ ಕ್ಷಮೆ