ಯತ್ನಾಳ್ ಉಚ್ಚಾಟನೆಗೆ ಬಿಗಿಪಟ್ಟು: ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ
ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಣ ರಾಜಕೀಯ ಶುರುವಾಗಿದ್ದು, ಇದಕ್ಕೆ ಕಡಿವಾಣ ಹಾಕಲೇಬೇಕೆಂದು ನಾಯಕರು, ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇನ್ನು ವಿಜಯೇಂದ್ರ ಬಣ ಯತ್ನಾಳ್ ವಿರುದ್ಧ ಸಿಡಿದೆದ್ದಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಪಟ್ಟು ಹಿಡಿದಿದೆ.
ಬೆಂಗಳೂರು, (ಡಿಸೆಂಬರ್ 01): ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯೇಂದ್ರ ಆಪ್ತ ಬಣ ಸಿಡಿದೆದ್ದಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದು, ಈ ಸಂಬಂಧ ಹೈಕಮಾಂಡ್ಗೆ ಸಂದೇಶ ರವಾನಿಸಲು ಶಕ್ತಿ ಪ್ರದರ್ಶನಕ್ಕೆ ವಿಜಯೇಂದ್ರ ಬಣ ಮುಂದಾಗಿದೆ. 30ಕ್ಕೂ ಹೆಚ್ಚು ಜನರ ತಂಡ ಚಾಮುಂಡಿ ಬೆಟ್ಟದಲ್ಲಿ ದುಷ್ಟ ಸಂಹಾರದ ಶಪಥ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಂತ್ರ ಮೈಸೂರಿನಲ್ಲೇ ಕಾರ್ಯಕರ್ತರ ಸಭೆ ನಡೆಸಿದ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ರು. ಬಳಿಕ ಸುದ್ಧಿಗೋಷ್ಟಿ ನಡೆಸುವ ವೇಳೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ರು. ಯತ್ನಾಳ್‌ನನ್ನ ಉಚ್ಚಾಟನೆ ಮಾಡಿ, ಲಾಭ ಏನಿಲ್ಲ ಅಂತಾ ಘೋಷಣೆ ಕೂಗಿ ಇದೀಗ ಇಂದು(ಡಿಸೆಂಬರ್ 01) ಬೆಳ್ಳಂಬೆಳಗ್ಗೆ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದೆ.
ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು. ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವು ಮುಖಂಡರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ್ದು, ಬ್ರೇಕ್ ಫಾಸ್ಟ್ ಮೀಟಿಂಗ್ ಸಭೆ ನಡೆಸಿದ್ದು, ಯತ್ನಾಳ್ ಉಚ್ಚಾಟನೆಗೆ ಕೇಳಿ ಬಂದಿರುವ ಕಾರ್ಯಕರ್ತರ ಅಭಿಪ್ರಾಯವನ್ನು ಈ ಸಭೆಯಲ್ಲಿ ಯಡಿಯೂರಪ್ಪ ಮುಂದೆ ಇಟ್ಟಿದೆ.