ನೀನು ಬ್ಯಾಟಿಂಗ್ ಮಾಡಿದ್ದು ಸಾಕು ಬಾ; ಮೊಹಮ್ಮದ್ ರಿಜ್ವಾನ್ಗೆ ಲೈವ್ ಪಂದ್ಯದಲ್ಲೇ ಅವಮಾನ
Mohammad Rizwan's BBL Retired Out: ಬಿಬಿಎಲ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಕಳಪೆ ಪ್ರದರ್ಶನ ಮುಂದುವರಿಸಿದ್ದು, ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಲೈವ್ ಪಂದ್ಯದಲ್ಲೇ ಅವರನ್ನು ರಿಟೈರ್ಡ್ ಔಟ್ ಮಾಡಿದೆ. ಬಿಬಿಎಲ್ ಇತಿಹಾಸದಲ್ಲಿ ಹೀಗಾದ ಮೊದಲ ವಿದೇಶಿ ಆಟಗಾರ ರಿಜ್ವಾನ್ ಆಗಿದ್ದು, ಇದು ಪಾಕಿಸ್ತಾನ ಟಿ20 ತಂಡಕ್ಕೆ ಅವರ ಮರಳುವಿಕೆ ಕುರಿತು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಘಟನೆ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.
ಪಾಕಿಸ್ತಾನದ ಟಿ20 ತಂಡದಿಂದ ಹೊರಬಿದ್ದಿರುವ ತಂಡದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತೆ ತಂಡ ಕೂಡಿಕೊಳ್ಳುವುದು ಭಾಗಶಃ ಅನುಮಾನವಾಗಿದೆ. ಏಕೆಂದರೆ ಮತ್ತೆ ತಂಡ ಕೂಡಿಕೊಳ್ಳುವ ಇರಾದೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಸೇರಿಕೊಂಡಿದ್ದ ರಿಜ್ವಾನ್ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ರಿಜ್ವಾನ್ ಅವರ ಈ ಕಳಪೆ ಫಾರ್ಮ್ ಹಾಗೂ ನಿಧಾನಗತಿಯ ಬ್ಯಾಟಿಂಗ್‌ನಿಂದ ಬೇಸತ್ತಿರುವ ತಂಡದ ಮ್ಯಾನೇಜ್ಮೆಂಟ್ ಅವರನ್ನು ಲೈವ್ ಪಂದ್ಯದಲ್ಲಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್ಗೆ ವಾಪಸ್ ಕರೆಸಿಕೊಂಡಿದೆ. ಈ ಮೂಲಕ ರಿಜ್ವಾನ್ ಬಿಬಿಎಲ್‌ನಿಂದ ನಿವೃತ್ತರಾದ ಮೊದಲ ವಿದೇಶಿ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ರಿಜ್ವಾನ್ ನಿಧಾನಗತಿಯ ಬ್ಯಾಟಿಂಗ್
ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಪಾಕಿಸ್ತಾನಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಜ್ವಾನ್ ಅವರನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಬಿಎಲ್ 15 ಸೀಸನ್‌ಗಾಗಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ, ರಿಜ್ವಾನ್ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಈ ಆವೃತ್ಇಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಅರ್ಧಶತಕ ಗಳಿಸಲು ವಿಫಲರಾಗಿರುವ ರಿಜ್ವಾನ್, ನಿಧಾನಗತಿಯ ಬ್ಯಾಟಿಂಗ್‌ಗಾಗಿ ಹೆಚ್ಚಿನ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಬಹುಶಃ ಅವರ ಸ್ಥಿರ ಬ್ಯಾಟಿಂಗ್ ಶೈಲಿಯಿಂದಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ತಾಳ್ಮೆಯ ಕಟ್ಟೆ ಕೊನೆಗೂ ಒಡೆದಿದೆ.
ಜನವರಿ 12, ಸೋಮವಾರ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ, ರೆನೆಗೇಡ್ಸ್ ಮೊದಲು ಬ್ಯಾಟ್ ಮಾಡಿ ಒಂಬತ್ತು ಓವರ್‌ಗಳಲ್ಲಿ 83 ರನ್ ಗಳಿಸಿತು. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಿಜ್ವಾನ್ 18 ನೇ ಓವರ್ವರೆಗೆ ಕ್ರೀಸ್‌ನಲ್ಲಿದ್ದರು. ಈ ಸಮಯದಲ್ಲಿ, ರಿಜ್ವಾನ್ 23 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಕೇವಲ 26 ರನ್ ಕಲೆಹಾಕಿದರು. ಹೀಗಾಗಿ ತಂಡದ ಸ್ಕೋರ್ ಕೇವಲ 154 ರನ್ ಆಗಿತ್ತು. ಆದ್ದರಿಂದ ಕೊನೆಯ ಎರಡು ಓವರ್‌ಗಳಲ್ಲಿ ಸಾಧ್ಯವಾದಷ್ಟು ರನ್ ಗಳಿಸಲು, ನಾಯಕ ವಿಲ್ ಸದರ್ಲ್ಯಾಂಡ್, ರಿಜ್ವಾನ್ ಅವರನ್ನು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಡಗೌಟ್ಗೆ ವಾಪಸ್ ಕರೆಸಿಕೊಂಡರು.
ಬಿಬಿಎಲ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ
ಸದರ್ಲ್ಯಾಂಡ್ ತಕ್ಷಣ ಡಗೌಟ್ನಿಂದ ಎದ್ದು 18 ನೇ ಓವರ್ ಮುಗಿದ ತಕ್ಷಣ ರಿಜ್ವಾನ್ಗೆ ರಿಟೈರ್ಡ್ ಔಟ್ ಆಗುವಂತೆ ಕರೆ ನೀಡಿದರು. ರಿಜ್ವಾನ್ಗೆ ಆರಂಭದಲ್ಲಿ ಇದು ಅರ್ಥವಾಗಲಿಲ್ಲ, ಆದರೆ ಸದರ್ಲ್ಯಾಂಡ್ ಮೂರು ಅಥವಾ ನಾಲ್ಕು ಬಾರಿ ಸನ್ನೆ ಮಾಡಿದಾಗ, ತಮ್ಮನ್ನು ರಿಟೈರ್ಡ್ ಔಟ್ ಎಂದು ಕರೆಯಲಾಗುತ್ತಿದೆ ಎಂದು ಅರಿತುಕೊಂಡರು. ಮುಜುಗರಕ್ಕೊಳಗಾದ ರಿಜ್ವಾನ್ ಪೆವಿಲಿಯನ್ಗೆ ಹಿಂತಿರುಗಲು ಪ್ರಾರಂಭಿಸಿದರು. ಇದರೊಂದಿಗೆ, ಅವರು ಬಿಬಿಎಲ್‌ನಲ್ಲಿ ರಿಟೈರ್ಡ್ ಔಟ್ ಆದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಈ ರೀತಿ ರಿಟೈರ್ಡ್ ಔಟ್ ಆದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಕುಖ್ಯಾತಿಗೂ ಪಾತ್ರರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ