IND vs AUS: ರಾಹುಲ್ ಓಪನರ್; ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ದಾಖಲೆ ಹೇಗಿದೆ?

|

Updated on: Dec 05, 2024 | 7:02 PM

Rohit Sharma: ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಪರ್ತ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಮತ್ತೊಮ್ಮೆ ಆರಂಭಿಕನಾಗಿ ಆಡಲಿದ್ದಾರೆ. ಹೀಗಾಗಿ ರೋಹಿತ್ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಅಡಿಲೇಡ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾಕ್ಕೆ ಓಪನರ್ ಯಾರು ಎಂಬ ಪ್ರಶ್ನೆ ಪ್ರತಿಯೊಬ್ಬ ಭಾರತೀಯ ಅಭಿಮಾನಿಯ ಮನದಲ್ಲಿತ್ತು. ಇದೀಗ ಈ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ. ಪಂದ್ಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಮಾತನಾಡಿದ ನಾಯಕ ರೋಹಿತ್ ಅಡಿಲೇಡ್ ಟೆಸ್ಟ್‌ನಲ್ಲಿ ನಾನು ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ ಎಂದು ರೋಹಿತ್ ಹೇಳಿದ್ದಾರೆ. ನನ್ನ ಬದಲು ಪರ್ತ್​ ಟೆಸ್ಟ್‌ನಲ್ಲಿ ಆರಂಭಿಕನಾಗಿ ಆಡಿದ್ದ ಕೆಎಲ್ ರಾಹುಲ್ ಮತ್ತೊಮ್ಮೆ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು

ಕೆಎಲ್ ರಾಹುಲ್ ಅವರ ಆರಂಭಿಕ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ರೋಹಿತ್ ಶರ್ಮಾ, ‘ನಾನು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಅನ್ನು ಮನೆಯಿಂದಲೇ ನೋಡಿದ್ದೇನೆ, ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆದ್ದರಿಂದ ಈಗ ಆರಂಭಿಕ ಪಾಲುದಾರಿಕೆಯಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ. ಭವಿಷ್ಯದಲ್ಲಿ ವಿಷಯಗಳು ಖಂಡಿತವಾಗಿಯೂ ವಿಭಿನ್ನವಾಗಿರಬಹುದು. ಕೆಎಲ್ ರಾಹುಲ್ ವಿದೇಶಿ ಪಿಚ್‌ಗಳಲ್ಲಿ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರೇ ಆರಂಭಿಕನಾಗಿರಲಿದ್ದಾರೆ ಎಂದಿದ್ದಾರೆ.

ವಾಸ್ತವವಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ಪರ್ತ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಎರಡನೇ ಇನ್ನಿಂಗ್ಸ್‌ನಲ್ಲಿ 77 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಹೀಗಾಗಿ ರಾಹುಲ್ ಅವರ ಇನ್ನಿಂಗ್ಸ್ ನೋಡಿದ ರೋಹಿತ್ ಶರ್ಮಾ ಇದೀಗ ತಮ್ಮ ಬ್ಯಾಟಿಂಗ್ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಅದರಂತೆ ಬರೋಬ್ಬರಿ 7 ವರ್ಷಗಳ ಬಳಿಕ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡುವುದನ್ನು ನಾವು ಕಾಣಬಹುದು.

ರಾಹುಲ್​ಗೆ ಆರಂಭಿಕ ಸ್ಥಾನ ಬಿಟ್ಟುಕೊಟ್ಟಿರುವ ನಾಯಕ ರೋಹಿತ್ ಶರ್ಮಾ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಈ ಬಗ್ಗೆ ಹೇಳಿಕೊಂಡಿರುವ ರೋಹಿತ್, ‘ಸದ್ಯಕ್ಕೆ ನನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಇದುವರೆಗೆ ನಿರ್ಧರಿಸಿಲ್ಲ. ಹೀಗಾಗಿ ನಾನು ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಬಹುದು. ಮಧ್ಯದಲ್ಲಿ ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ತಂಡದಲ್ಲಿ ಟಾಪ್ 4 ಸ್ಥಾನಗಳು ಭರ್ತಿಯಾಗಿವೆ. ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಆ ಬಳಿಕ ಶುಭ್​ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಲಿದ್ದು, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದು, ರೋಹಿತ್ ಶರ್ಮಾ ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡಬಹುದು.

ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ದಾಖಲೆ ಹೇಗಿದೆ?

2013 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಮೊದಲ ಆರು ವರ್ಷಗಳಲ್ಲಿ ಐದನೇ ಅಥವಾ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಅವಧಿಯಲ್ಲಿ ರೋಹಿತ್ ಅವರ ಬ್ಯಾಟ್ ಘರ್ಜಿಸಿತ್ತು. ತನ್ನ ಚೊಚ್ಚಲ ಪಂದ್ಯದಲ್ಲೇ ರೋಹಿತ್ ವೆಸ್ಟ್ ಇಂಡೀಸ್ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು 177 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.

ರೋಹಿತ್ ಇದುವರೆಗೆ ಮಧ್ಯಮ ಕ್ರಮಾಂಕದಲ್ಲಿ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 39.62 ರ ಸರಾಸರಿಯಲ್ಲಿ 1585 ರನ್ ಗಳಿಸಿದ್ದಾರೆ. ರೋಹಿತ್ ಆರನೇ ಕ್ರಮಾಂಕದಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ಅಂದರೆ ಹಿಟ್‌ಮ್ಯಾನ್ ಓಪನಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲೂ ಸಾಕಷ್ಟು ರನ್ ಕಲೆಹಾಕಿದ್ದಾರೆ. ಹೀಗಾಗಿ ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ರೋಹಿತ್ ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 05, 2024 07:01 PM