400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್? ಕರ್ನಾಟಕದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್ ಪಾಟೀಲ್
ಕರ್ನಾಟಕ-ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣದಲ್ಲಿ, 20 ದಿನಗಳಾದರೂ ಸುಳಿವು ಸಿಗದ ಕಾರಣ ದೂರುದಾರ ಸಂದೀಪ್ ಪಾಟೀಲ್ ಮಹಾರಾಷ್ಟ್ರ ಎಸ್ಐಟಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ನಾಶಿಕ್‌ನಲ್ಲಿ ದೂರು ನೀಡಿದ್ದರೂ ಯಾವುದೇ ಅಪ್‌ಡೇಟ್ ಸಿಗದ ಹಿನ್ನೆಲೆಯಲ್ಲಿ, ಅವರು ಈಗ ಕರ್ನಾಟಕದ ಬೆಳಗಾವಿಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಬೆಳಗಾವಿ, ಜನವರಿ 29: ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಘಾಟ್ ಬಳಿ ನಡೆದ 400 ಕೋಟಿ ರೂ. ಬೃಹತ್ ದರೋಡೆ ಪ್ರಕರಣದ ತನಿಖೆ ಚುರುಕುಗೊಂಡಿದ್ದರೂ, ದೂರುದಾರರು ಮಹಾರಾಷ್ಟ್ರ ವಿಶೇಷ ತನಿಖಾ ದಳ (ಎಸ್ಐಟಿ)ದ ಕಾರ್ಯವೈಖರಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿ 20 ದಿನಗಳು ಕಳೆದರೂ ದರೋಡೆ ಬಗ್ಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ದೂರುದಾರ ಸಂದೀಪ್ ಪಾಟೀಲ್ ಅವರು ಕರ್ನಾಟಕದಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಂದೀಪ್ ಪಾಟೀಲ್ ಅವರು ಈ ಹಿಂದೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿ, ದೂರು ದಾಖಲಿಸಿದ್ದರು. ಆದರೆ, ಇಲ್ಲಿಯವರೆಗೂ ಅವರಿಗೆ ಯಾವುದೇ ರೀತಿಯ ಅಪ್‌ಡೇಟ್‌ಗಳು ಸಿಕ್ಕಿಲ್ಲ. ಈ ನಿರಾಶಾದಾಯಕ ಬೆಳವಣಿಗೆಯ ನಂತರ, ಅವರು ಬೆಳಗಾವಿಯಲ್ಲಿ ಹೊಸದಾಗಿ ದೂರು ದಾಖಲಿಸಲು ಮುಂದಾಗಿದ್ದು, ಕರ್ನಾಟಕದಲ್ಲಿ ಪ್ರಕರಣದ ತನಿಖೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
