‘ಇನ್ನು 6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಈಗಾಗಲೇ ಇರುವ ಒಟಿಟಿ ಸಂಸ್ಥೆಗಳು ಕನ್ನಡದ ಸಿನಿಮಾಗಳಿಗೆ ಸೂಕ್ತ ಮನ್ನಣೆ ನೀಡುತ್ತಿಲ್ಲ ಎಂಬ ಮಾತಿದೆ. ಹಾಗಾಗಿ ಸರ್ಕಾರದ ಕಡೆಯಿಂದಲೇ ಕನ್ನಡಕ್ಕಾಗಿ ಒಂದು ಒಟಿಟಿ ಆರಂಭ ಆಗಬೇಕು ಎಂಬುದು ಎಲ್ಲರ ಬಯಕೆ. ಈ ಹಿನ್ನೆಲೆಯಲ್ಲಿ ಸಾಧು ಕೋಕಿಲ ಅವರು ಹೊಸ ಘೋಷಣೆ ಮಾಡಿದ್ದಾರೆ. ಮುಂಬರುವ 6 ತಿಂಗಳ ಒಳಗೆ ‘ನಮ್ಮ ಚಲನಚಿತ್ರ’ ಒಟಿಟಿ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಹೊಸ ಕಟ್ಟಡ ಇಂದು (ಜೂನ್ 30) ನಿರ್ಮಾಣ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟಡದ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭಕ್ಕೆ ಕನ್ನಡ ಚಿತ್ರರಂಗದ ಅನೇಕರು ಸಾಕ್ಷಿಯಾದರು. ಈ ವೇಳೆ ವೇದಿಕೆಯಲ್ಲಿ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಹೊಸ ವಿಷಯ ತಿಳಿಸಿದರು. ಶೀಘ್ರದಲ್ಲೇ ಕನ್ನಡದ ಹೊಸ ಒಟಿಟಿ ಕಾರ್ಯಾರಂಭ ಆಗಲಿದೆ ಎಂದು ಅವರು ಹೇಳಿದ್ದಾರೆ. ‘ಇನ್ನು ಕೇವಲ 6 ತಿಂಗಳಲ್ಲಿ ಸರ್ಕಾರದ ವತಿಯಿಂದ, ಖಾಸಗಿಯವರ ಸಹಭಾಗಿತ್ವದಲ್ಲಿ ‘ನಮ್ಮ ಚಲನಚಿತ್ರ’ ಎಂಬ ಒಟಿಟಿ ಶುರುವಾಗುತ್ತದೆ. ಕೇವಲ 6 ತಿಂಗಳಲ್ಲಿ ನಾವು ಇದನ್ನು ಶುರು ಮಾಡುವುದು ಖಚಿತ. ಅದಕ್ಕೂ ಮುನ್ನ ‘ನಮ್ಮ ಚಲನಚಿತ್ರ’ ಎಂಬ ವೆಬ್ಸೈಟ್ ಕೂಡ ಪ್ರಾರಂಭಿಸುತ್ತೇವೆ. ಅದರಲ್ಲಿ ಸಿನಿಮಾಗಳ ಪೋಸ್ಟರ್, ಟ್ರೇಲರ್ ಎಲ್ಲವೂ ಇರುತ್ತದೆ’ ಎಂದು ಸಾಧು ಕೋಕಿಲ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos