ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವಣ ವಿಡಿಯೋ ವೈರಲ್
IPL 2026 LSG: ಇಂಡಿಯನ್ ಪ್ರೀಮಿಯರ್ ಲೀಗ್ನ ಸೀಸನ್-19ರ ಮೊದಲಾರ್ಧದಲ್ಲಿ 7 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಈ ಗೆಲುವುಗಳ ಮೂಲಕ ಪ್ರಸ್ತುತ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅಂದರೆ ಎಲ್ಎಸ್ಜಿ ತಂಡವು ಪ್ಲೇಆಫ್ಗೇರಲು ದ್ವಿತೀಯಾರ್ಧದಲ್ಲಿ ಪ್ರಚಂಡ ಪ್ರದರ್ಶನ ನೀಡಲೇಬೇಕು.
ಐಪಿಎಲ್ 2026ರ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ರಿಷಬ್ ಪಂತ್ ಅವರ ನಡುವಿನ ವಿಶೇಷ ಬಾಂಧವ್ಯದ ಕಾರಣಕ್ಕಾಗಿ ಸುದ್ದಿಯಲ್ಲಿದೆ.
ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಪುಟಿದ ಚೆಂಡು ರಿಷಬ್ ಪಂತ್ ಅವರ ಮೂಗಿಗೆ ಬಲವಾಗಿ ಬಡಿದಿತ್ತು. ಈ ನೋವಿನ ನಡುವೆ ಪಂತ್ ಪಂದ್ಯದಲ್ಲಿ ಮುಂದುವರೆದಿದ್ದರು. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡಲು ರಿಷಭ್ ಪಂತ್ಗೆ ಸಾಧ್ಯವಾಗಿರಲಿಲ್ಲ.
ಇತ್ತ ಸೋಲಿನ ನೋವಿನ ನಡುವೆ ರಿಷಭ್ ಪಂತ್ ಎಲ್ಎಸ್ಜಿ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರನ್ನು ಮೈದಾನದಲ್ಲಿ ಭೇಟಿಯಾಗಿದ್ದರು.
ಸಾಮಾನ್ಯವಾಗಿ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದ್ದ ಗೋಯೆಂಕಾ, ಈ ಬಾರಿ ಪಂತ್ ಅವರ ಬಳಿ ಬಂದು ಅತ್ಯಂತ ಪ್ರೀತಿಯಿಂದ ಮಾತನಾಡಿಸಿದರು. ಅಲ್ಲದೆ ಪಂತ್ ಅವರ ಮೂಗಿನ ಗಾಯದ ಬಗ್ಗೆ ವಿಚಾರಿಸಿ, ಅವರನ್ನು ಅಪ್ಪಿಕೊಂಡು ಬೆನ್ನುತಟ್ಟುವ ಮೂಲಕ ಧೈರ್ಯ ತುಂಬಿದರು.
ಹಿಂದಿನ ಸೀಸನ್‌ಗಳಲ್ಲಿ ಸಂಜೀವ್ ಗೋಯೆಂಕಾ ಅವರು ಆಟಗಾರರೊಂದಿಗೆ ನಡೆಸುತ್ತಿದ್ದ ಸಂವಾದಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದವು. ಆದರೆ, ಈ ಬಾರಿ ಗೋಯೆಂಕಾ ಅವರ ಸೌಮ್ಯ ಸ್ವಭಾವ ಮತ್ತು ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದರೊಂದಿಗೆ ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿಗೆ ಈ ಒಂದು ದೃಶ್ಯ ಪೂರ್ಣವಿರಾಮ ಇಟ್ಟಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 159 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್ಗಳಲ್ಲಿ 118 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಲ್ಎಸ್ಜಿ ಪಡೆ 40 ರನ್ಗಳಿಂದ ಸೋಲೊಪ್ಪಿಕೊಂಡಿದೆ.