ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್, ಪರ್ಯಾಯ ಮಾರ್ಗ ಇಲ್ಲಿದೆ
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದೆ. ಉಗರಗೊಳದಿಂದ ಬರುವ ರಸ್ತೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದರೆ, ನಗರದಿಂದ ಪರ್ಯಾಯ ಮಾರ್ಗ ಲಭ್ಯವಿದೆ. ಆಗಸ್ಟ್ 9 ರ ನೂಲ ಹುಣ್ಣಿಮೆ ಜಾತ್ರೆಯ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ರಸ್ತೆ ಸ್ಥಗಿತದಿಂದಾಗಿ ಭಕ್ತರಿಗೆ ತೊಂದರೆಯಾಗುತ್ತಿದೆ.
ಬೆಳಗಾವಿ, ಆಗಸ್ಟ್ 08: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ರೇಣುಕಾ ಯಲ್ಲಮ್ಮ (ಸವದತ್ತಿ ಯಲ್ಲಮ್ಮ) ಅಸಂಖ್ಯ ಭಕ್ತರ ಆರಾಧ್ಯ ದೇವತೆ, ಕುಲ ದೇವತೆ. ಪ್ರತಿದಿನ ದೇವಸ್ಥಾನದಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಅಸಂಖ್ಯೆ ಭಕ್ತರು ಆಗಮಿಸುತ್ತಾರೆ. ಸವದತ್ತಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಗುಡ್ಡದ ಮೇಲಿನಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಯಲ್ಲಮ್ಮನ ಗುಡ್ಡದ ಹೊರವಲಯದಲ್ಲಿ ರಸ್ತೆ ಜಲಾವೃತಗೊಂಡಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
ಉಗರಗೊಳದಿಂದ ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಗಿತಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಸವದತ್ತಿ ನಗರದಿಂದ ಗುಡ್ಡಕ್ಕೆ ಹೋಗಬಹುದಾಗಿದೆ. ಆಗಸ್ಟ್ 09ರಿಂದ ನೂಲ ಹುಣ್ಣಿಮೆ ಜಾತ್ರೆ ಹಿನ್ನೆಲೆಯಲ್ಲಿ ಯಲ್ಲಮ್ಮನ ಗುಡ್ಡಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಮಹಾರಾಷ್ಟ್ರ, ಗೋವಾ ಸೇರಿದಂತೆ ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತರು ಬರುತ್ತಿದ್ದಾರೆ. ಆದರೆ, ರಸ್ತೆ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಭಕ್ತರು ಪರದಾಡಿಸಿದರು.