ಮುಂದಿನ 3 ತಿಂಗಳ ಕಾಲ 10 ಸಾವಿರ ವಿದೇಶಿ ಪಕ್ಷಿಗಳ ಕಲರವ ಕಣ್ಮನ ಸೆಳೆಯುತ್ತದೆ ಮಾಗಡಿ ಕೆರೆಯಲ್ಲಿ
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಸದ್ಯ 10 ಸಾವಿರಕ್ಕೂ ಅಧಿಕ ಪಕ್ಷಿಗಳು ಇದ್ದು ಮುಂದಿನ 3 ತಿಂಗಳಲ್ಲಿ ಇನ್ನೂ ಹೆಚ್ಚಿನ ಪಕ್ಷಿಗಳು ಕಾಣಸಿಗುತ್ತವೆ. ಇವುಗಳ ಈಜು, ಚಿಲಿಪಿಲಿ ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತಿದೆ.
ಆ ಗ್ರಾಮದ ಕೆರೆಯಲ್ಲಿ ಕೇವಲ ನೀರಷ್ಟೇ ತುಂಬಿಕೊಂಡಿಲ್ಲ. ಬದಲಾಗಿ ಆಕಾಶದತ್ತರಕ್ಕೆ ಹಾರೋ ಬಾನಾಡಿಗಳ ಲೋಕವನ್ನೇ ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ (Seasonal Migratory birds) ತೂಗುವ ತೊಟ್ಟಿಲಾಗುವ ಮೂಲಕ ಆಶ್ರಯ ತಾಣವಾಗಿದೆ. ಅಂತಹ ಸೌಂದರ್ಯದ ತಾಣವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು. ಬನ್ನಿ ಹಾಗಾದ್ರೆ ಭೂಲೋಕದ ಈ ಬಾನಾಡಿಗಳ ತಾಣವನ್ನೊಮ್ಮೆ ನೋಡ್ಕೊಂಡು ಬರೋಣ. ಹೀಗೆ ಸ್ವಚ್ಛಂದವಾಗಿ ಹಾರಾಡ್ತಿರೋ ಹಕ್ಕಿಗಳು…! ತಂಪಾದ ಕೆರೆಯಲ್ಲಿ ಈಜುತ್ತಿರೋ ಬಾನಾಡಿಗಳು…! ಕಣ್ಣು ಹಾಯಿಸಿದಲ್ಲೆಲ್ಲಾ ಶ್ವೇತ ವರ್ಣದ ವಿವಿಧ ಪ್ರಭೇದದ ಪಕ್ಷಿಗಳು..! ಹೌದು ಈ ಬಾನಾಡಿಗಳ ಮನಮೋಹಕ ದೃಶ್ಯಗಳು ಕಂಡು ಬರೋದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ (shirahatti taluk in Gadag).
ನೇಸರನ ಆಗಮನದ ಬೆನ್ನಲ್ಲೇ ವಿಶಾಲ ಕೆರೆಯ ಸುತ್ತಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಎಂಥವರನ್ನು ಬೆರಗು ಮೂಡಿಸ್ತಾ ಇದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ವಿಶಾಲವಾದ 138 ಎಕರೆಯಲ್ಲಿ ಕೆರೆಯಿದೆ.
ಗದಗ ದಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಲಕ್ಷ್ಮೇಶ್ವರ ದಿಂದ 12 ಕಿಲೋ ಮೀಟರ್ ಅಂತರದಲ್ಲಿ ಮಾಗಡಿ ಗ್ರಾಮವಿದೆ. 138 ಎಕರೆ ವಿಸ್ತಾರದ ಈ ಕೆರೆಯಲ್ಲಿ 23 ವರ್ಷಗಳಿಂದ, ಇಟಲಿ, ರಷ್ಯಾ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಢಾಕ್, ಟಿಬೆಟ್ ಗಳಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ.
ಇವುಗಳ ಕಲರವ ಪ್ರತಿವರ್ಷ ಕೆರೆಗೆ ರಂಗು ತರುತ್ತಾ ಇದೆ. ಜೊತೆಗೆ ಈ ಪಕ್ಷಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಬಾತು ಕೋಳಿಗಿಂತ ದೊಡ್ಡ ಗಾತ್ರದಲ್ಲಿರೋ ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬಾರ್ ಹೆಡೆಡ್ ಗೂಜ್, ಬ್ರಾಹ್ಮೀಣಿ ಡಕ್, ವೈಟ್ ಬಿಸ್, ಬ್ಲಾಕ್ ಬಿಸ್, ಬ್ಲಾಕ್ ನೆಕ್ಕಡ್, ಲೀಟಲ್ ಕಾರ್ಮೊರಂಟ್ ಹೀಗೆ ಸುಮಾರು 16ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ವೆ.
ಸದ್ಯ 10 ಸಾವಿರಕ್ಕೂ ಅಧಿಕ ಪಕ್ಷಿಗಳು ಇಲ್ಲಿದ್ದು ಮೂರು ತಿಂಗಳಲ್ಲಿ ಇನ್ನು ಹೆಚ್ಚಿನ ಪಕ್ಷಿಗಳು ಕಾಣಸಿಗುತ್ತವೆ. ಇವುಗಳ ಈಜು, ಚಿಲಿಪಿಲಿ ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತಿದೆ. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ಪಕ್ಷಿ ಪ್ರಿಯರು, ಶಾಲಾ ಮಕ್ಕಳು ಪ್ರವಾಸಕ್ಕಾಗಿ ಆಗಮಿಸಿ ಈ ಪಕ್ಷಿಗಳನ್ನು ನೋಡ್ತಿದ್ದಾರೆ. ಈ ಪಕ್ಷಿಗಳು ಇಲ್ಲಿಗೆ ಬರೋದು ಗದಗ ಜಿಲ್ಲೆಯವರಿಗೆ ಹೆಮ್ಮೆಯ ವಿಷಯ ಜೊತೆಗೆ ವಿದೇಶಿ ಪಕ್ಷಿಗಳು ಸ್ವದೇಶದಲ್ಲಿ ನೋಡಲು ಸಿಗುತ್ತಿರುವ ಬಗ್ಗೆ ಸಂತಸ ಕೂಡಾ ಇದೆ ಅಂತಿದ್ದಾರೆ ಪಕ್ಷಿಪ್ರಿಯರು.
Also Read: ಹಾರುತ ದೂರಾ ದೂರ! 3 ವರ್ಷ ವಿರಾಮದ ಬಳಿಕ ಹಾರುಹಕ್ಕಿಗಳು ಕರ್ನಾಟಕದ ಕಡೆಗೆ ವಲಸೆ ಬರುತಿವೆ, ಕಾರಣವೇನು ಗೊತ್ತಾ?
ಬೆಳಗ್ಗೆ ಹಿಂಡು ಹಿಂಡಾಗಿ ಬಾನಾಡಿಗಳ ಚಿತ್ತಾರ ನೋಡೋದೆ ಕಣ್ಣಿಗೆ ಹಬ್ಬ. ಚಿಲಿಪಿಲಿ ಶಬ್ದಗಳ ನಿನಾದ ಕೇಳೋಕೆ ಬಲು ಇಂಪು. ಸಂಜೆ ಸೂರ್ಯಸ್ತದ ವೇಳೆಗೆ ಈ ಪಕ್ಷಿಗಳು ಆಹಾರ ಆರಿಸಿಕೊಂಡ ಕೆರಯಿಂದ ಹಾರಿ ಹೋಗುತ್ತವೆ. ನೂರಾರು ಕಿಮೀ ದೂರ ಹೋಗುವ ಪಕ್ಷಿಗಳು ರೈತರ ಹೊಲದಲ್ಲಿ ಬೆಳೆದ ಬೆಳೆಗಳನ್ನು ತಿಂದು ಬೆಳಗ್ಗೆ ಸೂರ್ಯೋದಯ ವೇಳೆಗೆ ಕೆರೆಗೆ ಬಂದು ಠಿಕಾಣಿ ಹೂಡುತ್ತವೆ.
ಕೆರೆಯಲ್ಲಿ ಮರಿ ಹಾಗೂ ದೊಡ್ಡ ಹಕ್ಕಿಗಳ ಪ್ರೀತಿ, ವಾತ್ಸಲ್ಯ ನೋಡೋದೇ ಕಣ್ಣಿಗೆ ಹಬ್ಬ. ಹಕ್ಕಿಗಳು ಆಗಸದಲ್ಲಿ ಹಾರೋವಾಗ ಆಕಾಶದಲ್ಲಿ ಬೆಳ್ಳಕ್ಕಿಗಳ ಬಿಡಿಸಿದ ಚಿತ್ತಾರ ಕಾಣುತ್ತದೆ. ಕಳೆದ ಹಲವಾರು ವರ್ಷಗಳಿಂದ ವಿದೇಶಿ ಅತಿಥಿಗಳು ಈ ಕೆರೆಗೆ ಬರ್ತಾ ಇದ್ದು ಈ ಪಕ್ಷಿಗಳಿಂದ್ಲೇ ಮಾಗಡಿ ಕೆರೆ ಪ್ರಸಿದ್ದಿಯಾಗಿದೆ. ಆದ್ರೆ, ಇಂತಹ ವಿದೇಶಿ ಹಕ್ಕಿಗಳಿಗೆ ಆಶ್ರಯ ನೀಡಿರೋ ಕೆರೆ ಮಾತ್ರ ಯಾವುದೇ ರೀತಿಯ ಅಭಿವೃದ್ಧಿ ಇಲ್ಲ. ಇನ್ನು ದೂರದ ಊರಿನಿಂದ ಪಕ್ಷಿಗಳನ್ನು ನೋಡಲಿಕ್ಕೆ ಬರುವವರಿಗೆ ಸರಿಯಾದ ವ್ಯವಸ್ಥೆಗಳು ಆಗಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ
ನವೆಂಬರ್ ನಿಂದ ಮಾರ್ಚ್ ಕೊನೆಯ ವರೆಗೂ ಮಾಗಡಿ ಕೆರೆಯಲ್ಲಿ ಹಕ್ಕಿಗಳು ವಾಸವಿರುತ್ತವೆ. ನಂತ್ರ ತಮ್ಮ ದೇಶಗಳತ್ತ ಹಾರಿಹೋಗ್ತವೆ. ಹೀಗಾಗಿ ವಿದೇಶಿ ಪಕ್ಷಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ ಈ ಕೆರೆ. ಆದ್ರೆ ಇದನ್ನೊಂದು ಪ್ರಸಿದ್ದ ಪಕ್ಷಿಧಾಮವನ್ನಾಗಿ ಅಭಿವೃದ್ದಿಗೊಳಿಸುವಲ್ಲಿ ಮಾತ್ರ ಸರ್ಕಾರ ಮುಂದಾಗದಿರೋದು ವಿಷಾದದ ಸಂಗತಿಯಾಗಿದೆ
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ