ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?
ಶಕ್ತಿ ಯೋಜನೆಗೆ ಸಂಬಂಧಿಸಿದಂತೆ 4000 ಕೋಟಿ ರೂಪಾಯಿ ಬಾಕಿ ಹಣದ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ಅನುದಾನವೇ ಕಾರಣ ಎಂದು ಹೇಳಿದ್ದಾರೆ. ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಬೆಳಗಾವಿ, ಡಿಸೆಂಬರ್ 18: ಶಕ್ತಿ ಯೋಜನೆಗೆ ಸಂಬಂಧಿಸಿದಂತೆ 4000 ಕೋಟಿ ರೂಪಾಯಿ ಬಾಕಿ ಹಣದ ಬಗ್ಗೆ ವಿಪಕ್ಷಗಳ ಟೀಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. 2023ರಲ್ಲಿ ಅಧಿಕಾರ ಹಸ್ತಾಂತರಿಸಿದಾಗ 80,000 ಕೋಟಿ ರೂಪಾಯಿ ಬಿಲ್ ಬಾಕಿ ಇಟ್ಟುಹೋಗಿದ್ದರು ಮತ್ತು ಬಜೆಟ್‌ನಲ್ಲಿ ಇಲ್ಲದಿದ್ದರೂ 4 ಲಕ್ಷ ಕೋಟಿ ರೂಪಾಯಿ ಅನುಮೋದಿಸಿದ್ದರು ಎಂದು ರೆಡ್ಡಿ ತಿಳಿಸಿದರು.
ಶಕ್ತಿ ಯೋಜನೆಯಡಿ ಈಗಾಗಲೇ 1,748 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇನ್ನು 4000 ಕೋಟಿ ರೂಪಾಯಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಹಿಂದಿನ ಬಿಜೆಪಿ ಸರ್ಕಾರ ಕೆಎಸ್‌ಆರ್‌ಟಿಸಿಗೆ 4000 ಕೋಟಿ ರೂಪಾಯಿ ಸಾಲ ಇಟ್ಟು ಹೋಗಿತ್ತು ಮತ್ತು ನೌಕರರ 38 ತಿಂಗಳ ವೇತನ ಬಾಕಿ ಉಳಿಸಿಕೊಂಡಿತ್ತು ಎಂದು ದೂರಿದ್ದಾರೆ. ಕೇಂದ್ರ ಸರ್ಕಾರದಿಂದಲೂ ಜಲ ಜೀವನ್ ಮಿಷನ್, ನರೇಗಾ, ಭದ್ರಾ ಮೇಲ್ದಂಡೆ ಯೋಜನೆ ಮತ್ತು ವಿಶೇಷ ಅನುದಾನ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ರಾಜ್ಯಕ್ಕೆ ಬರಬೇಕಿದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಮಾನಾಡಲಿ ಎಂದು ಅವರು ಹೇಳಿದ್ದಾರೆ.
