ಬಿಜೆಪಿ ಪ್ರತಿಭಟನೆಗಿಳಿದಾಗ ಶಿವಕುಮಾರ್ ಜೊತೆ ವಿಜಯೇಂದ್ರ ಹರಟೆಗೆ ಕೂತಿದ್ದು ನಾಚಿಕೆಗೇಡು: ಬಸನಗೌಡ ಯತ್ನಾಳ್

|

Updated on: Jul 25, 2024 | 11:11 AM

ಭ್ರಷ್ಟಾಚಾರದ ಮೊತ್ತ ಎಷ್ಟೇ ಆಗಿರಲಿ ಅದು ಭ್ರಷ್ಟಾಚಾರವೇ ಎಂದ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವ 3.16 ಎಕರೆ ಜಮೀನು ಒಬ್ಬ ದಲಿತನಿಗೆ ಸೇರಿದ್ದು, ಹಾಗಾಗಿ ಶೋಷಿತ ವರ್ಗಗಳ ಬಗ್ಗೆ ಅತೀವ ಕಾಳಜಿ ತೋರುವ ಅವರು ಜಮೀನನ್ನು ದಲಿತ ವ್ಯಕ್ತಿಗೆ ಬಿಟ್ಟುಕೊಡಲಿ, ಹಾಗೆ ಮಾಡಿದರೆ ಅವರು ದೊಡ್ಡ ಮನುಷ್ಯ ಅನಿಸಿಕೊಳ್ಳುತ್ತಾರೆ ಎಂದರು.

ಬೆಂಗಳೂರು: ನಿನ್ನೆ ಬಿಜೆಪಿ ನಾಯಕರು ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸುವಾಗ ಬಿವೈ ವಿಜಯೇಂದ್ರ ಅವರು ಡಿಕೆ ಶಿವಕುಮಾರ್ ಅವರ ಬಳಿ ಒಂದು ಬಂಡಲ್ ಕಾಗದಪತ್ರಗಳನ್ನು ಒಯ್ದು ಅವುಗಳ ಮೇಲೆ ಸಹಿ ಮಾಡಿಸಿಕೊಂಡಿದ್ದು ಮತ್ತು ಅವರೊಂದಿಗೆ ಸುಮಾರು 25 ನಿಮಿಷಗಳ ಕಾಲ ಹರಟೆ ಹೊಡೆದಿದ್ದು ನೈತಿಕ ಅಧಃಪತನ ಬಿಂಬಿಸುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಶಿವಕುಮಾರ್ ರನ್ನು ಖುಷಿಪಡಿಸುವ ಪ್ರಯತ್ನ ವಿಜಯೇಂದ್ರ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತಿತ್ತು ಎಂದು ಹೇಳಿದ ಅವರು ಕಾಂಗ್ರೆಸ್ ಮತ್ತು ಬಿಎಸ್ ಯಡಿಯೂರಪ್ಪ ಕುಟುಂಬದ ನಡುವೆ ಹೊಂದಾಣಿಕೆಯಾಗಿದೆ, ಹಾಗಾಗೇ ಪರಸ್ಪರ ಬ್ಲ್ಯಾಕ್ ಮೇಲ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದರು. ಮುಡಾ ಹಗರನವನ್ನು ಒಂದೋ ಸಿಬಿಐ ತನಿಖೆಗೆ ಒಪ್ಪಿಸಬೇಕು ಇಲ್ಲವೇ ಸದನದಲ್ಲಿ ಚರ್ಚೆಗೆ ಅವಕಾಶ ಆಗಬೇಕು, ಹಗರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೆ ತಾವು ಹೋರಾಟ ನಿಲ್ಲಿಸಲ್ಲ ಎಂದು ಯತ್ನಾಳ್ ಹೇಳಿದರು. ಬಿಜೆಪಿ ನಾಯಕರು ಮೈಸೂರಿಂದ ಬೆಂಗಳೂರವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಮಾತಾಡುತ್ತಿರೋದು ವೃಥಾ ಕಾಲಹರಣದ ಸರ್ಕಸ್ ಬಿಟ್ಟರೆ ಮತ್ತೇನೂ ಅಲ್ಲ, ತಾನು ಕೇಂದ್ರದ ನಾಯಕರಿಗೆ ಹಗರಣ ಬಗ್ಗೆ ಪತ್ರ ಬರೆಯಲಿದ್ದು ಅಕ್ರಮದಲ್ಲಿ ಬಿಜೆಪಿ ನಾಯಕರ ಪಾತ್ರ ಇರುವುದನ್ನೂ ತಿಳಿಸುತ್ತೇನೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಭೈರತಿ ಸುರೇಶ್ ಆರೋಪ ಮಾಡಿದರೆ ಸಾಲದು ದಾಖಲೆ ತೋರಿಸಲಿ: ಬಸನಗೌಡ ಯತ್ನಾಳ್, ಶಾಸಕ

Follow us on