ಪುನೀತ್ ರಾಜಕುಮಾರ್ 11ನೇ ದಿನದ ಕಾರ್ಯದಲ್ಲಿ ಶಿವಣ್ಣ ಹಿರಿಯ ಪುತ್ರಿ ನಿರುಪಮಾ ಅಳುತ್ತಲೇ ಇದ್ದರು!
ಪುನೀತ್ ಅವರನ್ನು ಪ್ರೀತಿಯಿಂದ ಅಪ್ಪು ಚಿಕ್ಕಪ್ಪ ಎಂದು ಕರೆಯುತ್ತಿದ್ದ ಶಿವರಾಜಕುಮಾರ ಅವರ ಹಿರಿ ಮಗಳು ನಿರುಪಮಾ ಸಮಾಧಿ ಮುಂದೆ ಬಿಕ್ಕಿಬಿಕ್ಕಿ ಅಳುತ್ತಿದ್ದರು.
ಪುನೀತ್ ರಾಜಕುಮಾರ್ ಗತಿಸಿ ಇಂದಿಗೆ (ಸೋಮವಾರ) 11 ದಿನಗಳಾಯಿತು. ಡಾ ರಾಜಕುಮಾರ್ ಅವರ ಕುಟುಂಬ ಸದಸ್ಯರು ಇಂದು ಸಮಾಧಿಗೆ ಭೇಟಿ ನೀಡಿ 11 ನೇ ದಿನದ ಕಾರ್ಯ ನಡೆಸಿದರು. ಪುನೀತ್ ಅವರ ಪತ್ನಿ ಆಶ್ವಿನಿ ಮತ್ತು ಅವರ ಇಬ್ಬರು ಮಕ್ಕಳು, ಶಿವರಾಜಕುಮಾರ್ ಅವರ ಪತ್ನಿ ಹಾಗೂ ಮಗಳು, ರಾಘವೇಂದ್ರ ರಾಜಕುಮಾರ ಅವರಲ್ಲದೆ, ಬಳಗದವರು, ಆಪ್ತರು ಮತ್ತು ಸಾವಿರಾರು ಅಭಿಮಾನಿಗಳು ಸಮಾಧಿಯ ಬಳಿ ಉಪಸ್ಥಿತರಿದ್ದರು. ಆಶ್ವಿನಿ ಮತ್ತು ಅವರ ಮಕ್ಕಳು ಪುನೀತ್ ಸಮಾಧಿಯ ಪ್ರದಕ್ಷಿಣೆ ಹಾಕಿ ಎಡೆಯಿಟ್ಟು ಪೂಜೆ ಸಲ್ಲಿಸಿದರು. ಆಶ್ವಿನಿ ಅವರಲ್ಲಿ ದುಃಖ ಮಡುಗಟ್ಟಿತ್ತು. ಪತಿಯ ಸಮಾಧಿ ಎದುರು ಮೌನವಾಗಿ ರೋದಿಸುತ್ತಿದ್ದಿದ್ದು ಸ್ಪಷ್ಟವಾಗಿ ಕಾಣುತಿತ್ತು.
ಪುನೀತ್ ಅವರನ್ನು ಪ್ರೀತಿಯಿಂದ ಅಪ್ಪು ಚಿಕ್ಕಪ್ಪ ಎಂದು ಕರೆಯುತ್ತಿದ್ದ ಶಿವರಾಜಕುಮಾರ ಅವರ ಹಿರಿ ಮಗಳು ನಿರುಪಮಾ ಸಮಾಧಿ ಮುಂದೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಅಪ್ಪು ಅವರನ್ನು ನೆನೆದು ದೂರದ ಅಮೇರಿಕಾನಲ್ಲಿ ಜನ ಅಳುತ್ತಿದ್ದಾರೆ, ಅವರ ಅಭಿಮಾನಿಗಳ ದುಃಖ ಇಂಗುತ್ತಿಲ್ಲ. ಇನ್ನು ಕುಟುಂಬದವರ ಗತಿ ಏನಾಗಿರಬೇಡ?
ಪುನೀತ್ ಅವರ ಹಿರಿಮಗಳು ಧೃತಿ ಅಪ್ಪನ ಸಮಾಧಿ ಮುಂದೆ ವಿಚಲಿತಳಾಗಿ ಅಳಲಾರಂಭಿಸುತ್ತಿದ್ದಂತೆ, ಶಿವಣ್ಣ ಅವಳ ಭುಜ ಹಿಡಿದು ಸಂತೈಸಿದರು. ಶಿವಣ್ಣ ಹಿಂದೆ ಅವರ ಪತ್ನಿ ಗೀತಾ ಶಿವರಾಜಕುಮಾರ್ ನಿಂತಿದ್ದರು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದಿದ್ದರಿಂದ ಕಂಠೀರವ ಸ್ಟುಡಿಯೋ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.