ಕಾಂಗ್ರೆಸ್ ನಾಯಕನ ಗೆಲುವಿಗೆ ಹರಿಕೆ ಹೊತ್ತು ತೀರಿಸಿದ ಬಿಜೆಪಿ ಕಟ್ಟಾಳು

| Updated By: ರಮೇಶ್ ಬಿ. ಜವಳಗೇರಾ

Updated on: Aug 19, 2024 | 8:22 PM

ಕೆಲವೊಂದು ಸಲ ಮನುಷ್ಯನ ಮಾನವೀಯ ಮೌಲ್ಯ. ಅವರ ಉಪಕಾರದ ಮನೋಭಾವ ಅವರ ಕೈ ಹಿಡಿಯುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಹೌದು...ಕಟ್ಟಾ ಬಿಜೆಪಿ ಕಾರ್ಯಕರ್ತನಾಗಿದ್ದರೂ ಸಹ ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಬೇಳೂರು ಗೋಪಾಲಕೃಷ್ಣ ಗೆಲುವಿಗೆ ಹರಿಕೆ ಹೊತ್ತುಕೊಂಡು ಇದೀಗ ಅದನ್ನು ತೀರಿಸಿದ್ದಾರೆ.

ಶಿವಮೊಗ್ಗ, (ಆಗಸ್ಟ್ 19): ಕಾಂಗ್ರೆಸ್ ಶಾಸಕನ ಗೆಲುವಿಗೆ ಬಿಜೆಪಿ ಕಾರ್ಯಕರ್ತ ಹರಕೆ ತೀರಿಸಿದ್ದಾರೆ. ಅರೇ ಇದೇನಿದು ಅಚ್ಚರಿ ಅಂತೀರಾ. ಅಚ್ಚರಿ ಅನ್ನಿಸಿದರೂ ಸತ್ಯ. ಶಿವಮೊಗ್ಗದ ಬಿಜೆಪಿ ನಿಷ್ಠಾವಂತ, ಹಳೇ ಕಾರ್ಯಕರ್ತರೊಬ್ಬರು ಕಾಂಗ್ರೆಸ್​​ನ ಬೇಳೂರು ಗೋಪಾಲಕೃಷ್ಣ ಗೆದ್ದಿರುವುದಕ್ಕೆ ಹರಿಕೆ ತೀರಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಬೇಳೂರು ಗೋಪಾಲಕೃಷ್ಣ ಅವರು ಗೆಲ್ಲಬೇಕೆಂದು ಬಿಜೆಪಿ ಕಾರ್ಯಕರ್ತ ಹರೀಶ್ ಪ್ರಭು ಎನ್ನುವರು ರಿಪ್ಪನ್ ಪೇಟೆಯ ವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸುವ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಹರಕೆ ತೀರಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತ ಹರೀಶ್ ಪ್ರಭು,  30 ವರ್ಷಹಳಿಂದ ನಾನು ಬಿಜೆಪಿ ಕಾರ್ಯಕರ್ತ. ಈಗಲೂ ನಾನು ಬಿಜೆಪಿ ಕಾರ್ಯಕರ್ತ. ನನ್ನ ರಕ್ತದ ನರ ನಾಡಿಗಳಲ್ಲಿ ಬಿಜೆಪಿ ಪಕ್ಷದ ಸಿದ್ದಾಂತ ಇದೆ. ಆದ್ರೆ ಬೇಳೂರು ಗೋಪಾಲಕೃಷ್ಣ ಅವರ ಮಾನವೀಯ ಮೌಲ್ಯ. ಅವರ ಉಪಕಾರದ ಮನೋಭಾವ ಪಕ್ಷದ ಚೌಕಟ್ಟು ಮೀರಿ ನನಗೆ ಅವರ ಪರವಾಗಿ ನಿಲ್ಲುವಂತೆ ಮಾಡಿದೆ. ಚುನಾವಣೆ ಸಮಯದಲ್ಲಿ ಬೇಳೂರಿಗೆ ಟಿಕೇಟ್ ತಪ್ಪಿಸಲು ಸಹ ಕಾಣದ ಕೈ ಕೆಲಸ ಮಾಡಿದವು. ಬೇಳೂರು ಗೋಪಾಲಕೃಷ್ಣ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಒಂದು ವರ್ಷದ ಬಳಿಕ‌ ಹರಕೆ ತೀರಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗೇರಲಿ ಎಂದು ಹರಕೆ ಮಾಡಿಕೊಂಡಿದ್ದೇನೆ ಎಂದರು.