VIDEO: ಅದು ನಾಟೌಟ್… ಅವರು ಬೇಕಂತಲೇ ವಿಡಿಯೋ ತೋರಿಸಿಲ್ಲ..!

Updated on: Sep 22, 2025 | 9:24 AM

India vs Pakistan: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್​ ಗಳಿಸಿದ್ದರು. 172 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್​ಗಳಲ್ಲಿ 174 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದ ವೇಳೆ ಮೂರನೇ ಅಂಪೈರ್ ನೀಡಿದ ತೀರ್ಪೊಂದು ಇದೀಗ ವಿವಾದಕ್ಕೀಡಾಗಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಫಖರ್ ಝಮಾನ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಫಖರ್, ಹಾರ್ದಿಕ್ ಪಾಂಡ್ಯ ಎಸೆದ 3ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ್ದರು.

ಚೆಂಡು ಕೈ ಸೇರುತ್ತಿದ್ದಂತೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಸಂಭ್ರಮಿಸಿದರು. ಇತ್ತ ಕಡೆ ಕ್ಯಾಚ್ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ಗೆ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಚೆಂಡು ನೆಲಕ್ಕೆ ತಗುಲಿರುವುದು ಗೋಚರಿಸಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

ಮೂರನೇ ಅಂಪೈರ್​ ತೀರ್ಪಿಗೆ ಅಚ್ಚರಿ ವ್ಯಕ್ತಪಡಿಸುತ್ತಾ ಫಖರ್ ಝಮಾನ್ ಮೈದಾನ ತೊರೆದಿದ್ದರು. ಇದೀಗ ಅಂಪೈರ್ ತೀರ್ಪಿನ ವಿರುದ್ಧ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೊಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಾನೆಲ್​ ಚರ್ಚೆಯಲ್ಲಿ ಮಾತನಾಡಿದ ಅಖ್ತರ್, ಫಖರ್ ಝಮಾನ್ ಕ್ಲಿಯರ್ ನಾಟೌಟ್. ಮೈದಾನದಲ್ಲಿ 26 ಕ್ಯಾಮೆರಾಗಳಿದ್ದವು.

ಇದಾಗ್ಯೂ ಅಂಪೈರ್ ಎಲ್ಲಾ ಆ್ಯಂಗಲ್​ನಲ್ಲಿ ಪರಿಶೀಲಿಸಿಲ್ಲ.  ಅವರು ಬೇಕಂತಲೇ ಎಲ್ಲಾ ಆ್ಯಂಗಲ್​ನಲ್ಲಿ ವಿಡಿಯೋ ತೋರಿಸಿಲ್ಲ ಎಂದು ಶೊಯೆಬ್ ಅಖ್ತರ್ ಆರೋಪಿಸಿದ್ದಾರೆ. ಇದೀಗ ಫಖರ್ ಝಮಾನ್ ಅವರ ಔಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಮುಂದುವರೆದಿದೆ.