ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ

Updated on: Jun 25, 2025 | 10:06 PM

ಆಕ್ಸಿಯಮ್-4ರ ಫಾಲ್ಕನ್ 9 ರಾಕೆಟ್ ಬಾಹ್ಯಾಕಾಶ ಕೇಂದ್ರಕ್ಕೆ ಹಾರುತ್ತಿದ್ದಂತೆ ಶುಭಾಂಶು ಶುಕ್ಲಾ ಅವರ ತಾಯಿ ಭಾವುಕರಾದರು. 1984ರಲ್ಲಿ ರಾಕೇಶ್ ಶರ್ಮಾ ಅವರ ಪ್ರಯಾಣದ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಗಗನಯಾತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನವದೆಹಲಿ, ಜೂನ್ 25: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇಂದು ಆಕ್ಸಿಯಮ್-4 ಬಾಹ್ಯಾಕಾಶ ಮಿಷನ್​ನಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಅವರ ಪ್ರಯಾಣದ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಗಗನಯಾತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಇಂದು ಮಧ್ಯಾಹ್ನ ಬಾಹ್ಯಾಕಾಶ ಯಾನಕ್ಕೆ ಬೀಳ್ಕೊಡುವಾಗ ಅವರ ತಾಯಿ ಆಶಾ ಶುಕ್ಲಾ ಕಣ್ಣಲ್ಲಿ ನೀರು ತುಂಬಿಕೊಂಡು ತಮ್ಮ ಮಗನಿಗೆ ಭಾವುಕ ವಿದಾಯ ಹೇಳಿದ್ದಾರೆ. CMS ಕಾನ್ಪುರ ರಸ್ತೆಯಲ್ಲಿರುವ ವರ್ಲ್ಡ್ ಯೂನಿಟಿ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ತಮ್ಮ ಮಗ ಇರುವ ಬಾಹ್ಯಾಕಾಶ ನೌಕೆಯ ಉಡಾವಣೆಯ ನೇರಪ್ರಸಾರ ವೀಕ್ಷಿಸಿದರು. ಈ ವೇಳೆ ಅವರು ಭಾವುಕರಾಗಿ ಕಣ್ಣೀರಿಟ್ಟರು. ರಾಕೆಟ್ ಉಡಾವಣೆಯಾಗುತ್ತಿದ್ದಂತೆ, ಪ್ರೇಕ್ಷಕರು ಭಾರೀ ಚಪ್ಪಾಳೆ, ಹರ್ಷೋದ್ಗಾರಗಳನ್ನು ಮಾಡಿದರು.

“ಇದು ನಮ್ಮ ಕುಟುಂಬ ಮತ್ತು ನಮ್ಮೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಹೆಮ್ಮೆಯ ಕ್ಷಣ. ನಗರದಾದ್ಯಂತ ನನ್ನ ಮಗನ ಸಾಧನೆಯನ್ನು ಆಚರಿಸುವ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ವಿಪರೀತ ಸಂತೋಷವಾಗುತ್ತಿದೆ. ತ್ರಿವೇಣಿ ನಗರದ ಒಬ್ಬ ಹುಡುಗ ಈಗ ನಕ್ಷತ್ರಗಳನ್ನು ತಲುಪುತ್ತಿದ್ದಾನೆ, ನಮ್ಮ ಆಶೀರ್ವಾದ ಅವನ ಮೇಲಿದೆ” ಎಂದು ಆಶಾ ಶುಕ್ಲಾ ಮಗನಿಗೆ ಶುಭ ಹಾರೈಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ