ಶುಭಾಂಶು ಶುಕ್ಲಾ 1.4 ಶತಕೋಟಿ ಭಾರತೀಯರ ಭರವಸೆ ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದಾರೆ; ಆಕ್ಸಿಯಮ್ -4 ಉಡಾವಣೆಗೆ ಮೋದಿ ಶ್ಲಾಘನೆ
Axiom-4: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ 1.4 ಶತಕೋಟಿ ಭಾರತೀಯರ ಭರವಸೆಯನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಬಾಹ್ಯಾಕಾಶ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಶುಭಾಂಶು ಶುಕ್ಲಾ ಇತಿಹಾಸ ಬರೆದಿದ್ದಾರೆ. ಹಲವಾರು ಸಚಿವರು ಕೂಡ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

ನವದೆಹಲಿ, ಜೂನ್ 25: ಭಾರತ, ಹಂಗೇರಿ, ಪೋಲೆಂಡ್ ಮತ್ತು ಅಮೆರಿಕದಿಂದ ಗಗನಯಾತ್ರಿಗಳನ್ನು ಹೊತ್ತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನದ ಯಶಸ್ವಿ ಉಡಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಬುಧವಾರ) ಸ್ವಾಗತಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಮೊದಲ ಭಾರತೀಯರಾಗುತ್ತಿರುವುದು ಭಾರತ ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. “ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವ ಮೊದಲ ಭಾರತೀಯರಾಗುವ ಹಾದಿಯಲ್ಲಿದ್ದಾರೆ. ಅವರು 1.4 ಬಿಲಿಯನ್ ಭಾರತೀಯರ ಆಶಯಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ತಮ್ಮೊಂದಿಗೆ ಹೊತ್ತುಕೊಂಡು ಹೋಗಿದ್ದಾರೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹಾಗೇ, ಪ್ರಧಾನಿ ಮೋದಿ ಶುಭಾಂಶು ಶುಕ್ಲಾ ಅವರ ಜೊತೆಗಿರುವ ನಾಲ್ವರು ಗಗನಯಾತ್ರಿಗಳಿಗೆ ಕೂಡ ಶುಭಾಶಯಗಳನ್ನು ಕೋರಿದರು. ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಮಿಷನ್ ಕಮಾಂಡರ್ ಡಾ. ಪೆಗ್ಗಿ ವಿಟ್ಸನ್ (ಯುಎಸ್), ಮತ್ತು ಮಿಷನ್ ತಜ್ಞರು ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
We welcome the successful launch of the Space Mission carrying astronauts from India, Hungary, Poland and the US.
The Indian Astronaut, Group Captain Shubhanshu Shukla is on the way to become the first Indian to go to International Space Station. He carries with him the wishes,…
— Narendra Modi (@narendramodi) June 25, 2025
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಈ ಕ್ಷಣವನ್ನು ಶ್ಲಾಘಿಸಿದ್ದಾರೆ. ವಸುಧೈವ ಕುಟುಂಬಕಂ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಸಂಸ್ಕೃತ ಮಾತನ್ನು ರಾಷ್ಟ್ರಪತಿ ಹೇಳಿದ್ದಾರೆ.
ಇದನ್ನೂ ಓದಿ: ಆಕ್ಸಿಯಮ್ ಮಿಷನ್ ಭಾಗವಾಗಿ ಇಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಭಾರತದ ಹೆಮ್ಮೆಯ ಗಗನಯಾತ್ರಿ ಶುಭಾಂಶು ಶುಕ್ಲಾ
ಭಾರತೀಯ ಬಾಹ್ಯಾಕಾಶ ಪರಿಶೋಧನೆಗೆ ಐತಿಹಾಸಿಕ ಹೆಜ್ಜೆಯಾಗಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು 4 ಸದಸ್ಯರ Axiom-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ತೆರಳುವ ಮೊದಲ ಭಾರತೀಯ ಗಗನಯಾತ್ರಿಯಾದರು. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಹೊತ್ತ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ IST ಇಂದು ಮಧ್ಯಾಹ್ನ 12.5ಕ್ಕೆ ಹಾರಿತು.
Best wishes to Group Captain #ShubhanshuShukla and the astronauts from Poland, Hungary and the US, as they embark on #AxiomMission4 to the International Space Station. pic.twitter.com/iG5SgYq4Yy
— Dr. S. Jaishankar (@DrSJaishankar) June 25, 2025
Axiom-4 ಮಿಷನ್ NASA ಮತ್ತು ಹೂಸ್ಟನ್ ಮೂಲದ Axiom ಸ್ಪೇಸ್ ನಡುವಿನ ವಾಣಿಜ್ಯ ಸಹಯೋಗವಾಗಿದೆ. ISSನಲ್ಲಿ ಅವರ 14 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಈ ಅಧ್ಯಯನಗಳು ಸೂಕ್ಷ್ಮ ಗುರುತ್ವಾಕರ್ಷಣೆಯ ಸಂಶೋಧನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಗಡಿಗಳನ್ನು ಅನ್ವೇಷಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Video: ನನ್ನ ಭುಜದ ಮೇಲೆ ತ್ರಿವರ್ಣ ಧ್ವಜವಿದೆ: ಬಾಹ್ಯಾಕಾಶದಿಂದ ಬಂದ ಶುಭಾಂಶು ಶುಕ್ಲಾರ ಮೊದಲ ಸಂದೇಶ
ರಾಕೇಶ್ ಶರ್ಮಾ ಅವರ 1984ರ ಐತಿಹಾಸಿಕ ಕಾರ್ಯಾಚರಣೆಯ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ. ಅವರ ಪಾತ್ರವು ವೈಜ್ಞಾನಿಕ ಸಂಶೋಧನೆ ಮಾತ್ರವಲ್ಲದೆ ಬಾಹ್ಯಾಕಾಶ ಸಂಪರ್ಕವನ್ನೂ ಒಳಗೊಂಡಿದೆ. ಇಂದು ಕಕ್ಷೆಯಿಂದ ನೀಡಿದ ಅವರ ಮೊದಲ ಸಂದೇಶದಲ್ಲಿ ಅವರು ಹೀಗೆ ಹೇಳಿದ್ದಾರೆ. “ಇದು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಆರಂಭ. ಜೈ ಹಿಂದ್, ಜೈ ಭಾರತ್. ಈ ಸಮಯದಲ್ಲಿ ನಾವು ಗಂಟೆಗೆ 7.5ಕಿಲೋಮೀಟರ್ ವೇಗದಲ್ಲಿ ಭೂಮಿಯ ಸುತ್ತಲೂ ಚಲಿಸುತ್ತೇವೆ. ನನ್ನ ಭುಜದ ಮೇಲೆ ತ್ರಿವರ್ಣ ಧ್ವಜವಿದೆ. ಅದು ನಾನು ಒಬ್ಬಂಟಿಯಲ್ಲ, ನೀವೆಲ್ಲರೂ ನನ್ನೊಂದಿಗಿದ್ದೀರಿ ಎನ್ನುವ ಭಾವನೆಯನ್ನು ನೀಡುತ್ತದೆ’’ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Wed, 25 June 25