ತೆಲಂಗಾಣದ ಕಾಜಿಪೇಟೆ ರೈಲು ಉತ್ಪಾದನಾ ಘಟಕದಲ್ಲಿ MEMU ರೈಲುಗಳ ತಯಾರಿ: ಅಶ್ವಿನಿ ವೈಷ್ಣವ್
ತೆಲಂಗಾಣದ ಕಾಜಿಪೇಟೆ ರೈಲು ಉತ್ಪಾದನಾ ಘಟಕದಲ್ಲಿ ಹೊಸ MEMU ರೈಲುಗಳ ತಯಾರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ ಅವರು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ 16-20 ಕೋಚ್‌ಗಳನ್ನು ಹೊಂದಿರುವ ಹೊಸ MEMU ರೈಲುಗಳನ್ನು ತೆಲಂಗಾಣದ ಕಾಜಿಪೇಟೆಯಲ್ಲಿರುವ ರೈಲು ಉತ್ಪಾದನಾ ಘಟಕದಲ್ಲಿ (RMU) ತಯಾರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

ದೆಹಲಿ, ಜೂ.25: ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ (Kishan Reddy) ಅವರು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರನ್ನು ಇಂದು (ಜೂ.25) ದೆಹಲಿಯಲ್ಲಿ ಭೇಟಿ ಮಾಡಿ, ತೆಲಂಗಾಣದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ವೇಳೆ ತೆಲಂಗಾಣದ ಕಾಜಿಪೇಟೆಯಲ್ಲಿ ಭಾರತೀಯ ರೈಲ್ವೆಯು ಅಲ್ಪ ಮತ್ತು ಮಧ್ಯಮ ದೂರದ ರೈಲು ಪ್ರಯಾಣವನ್ನು ಹೆಚ್ಚಿಸಲು ಹೊಸ ಪೀಳಿಗೆಯ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳನ್ನು ಪರಿಚಯಿಸುವ ಬಗ್ಗೆ ಸಚಿವ ಕಿಶನ್ ರೆಡ್ಡಿ, ಅಶ್ವಿನಿ ವೈಷ್ಣವ್ ಜತೆಗೆ ಚರ್ಚೆಯನ್ನು ನಡೆಸಿದ್ದಾರೆ.ಇದರ ಜತೆಗೆ ಕಲ್ಲಿದ್ದಲು ಜಾರಿ ಮತ್ತು ಸಾರಿಗೆ ವ್ಯವಸ್ಥೆಗಳ ದಕ್ಷತೆ ಬಗ್ಗೆಯೂ ಮಾತನಾಡಿದ್ದಾರೆ. ಕಲ್ಲಿದ್ದಲು ಸ್ಥಳಾಂತರಿಸುವಿಕೆಯ ಗುಣಮಟ್ಟ ಮತ್ತು ವೇಗವನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಿಲೋ ಲೋಡಿಂಗ್ ಮೂಲಸೌಕರ್ಯದ ಕಾರ್ಯವನ್ನು ವೇಗಗೊಳಿಸುವುದು ಹೇಗೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಇನ್ನು ಸಚಿವ ಕಿಶನ್ ರೆಡ್ಡಿ ಅವರು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ವೇಳೆ 16-20 ಕೋಚ್‌ಗಳನ್ನು ಹೊಂದಿರುವ ಹೊಸ MEMU ರೈಲುಗಳನ್ನು ತೆಲಂಗಾಣದ ಕಾಜಿಪೇಟೆಯಲ್ಲಿರುವ ರೈಲು ಉತ್ಪಾದನಾ ಘಟಕದಲ್ಲಿ (RMU) ತಯಾರಿಸಲಾಗುವುದು ಮತ್ತು ವಿಶೇಷವಾಗಿ ಹಬ್ಬದ ದಿನಗಳಲ್ಲಿ ನಗರೇತರ ಮತ್ತು ಅರೆ ನಗರ ಪ್ರದೇಶಗಳಿಗೆ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಕಾಜಿಪೇಟೆಯಲ್ಲಿ ರೈಲು ಉತ್ಪಾದನಾ ಘಟಕವನ್ನು (RMU) 716 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದನ್ನು ಜನವರಿ 2026 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಉತ್ಪಾದನಾ ಚಟುವಟಿಕೆಯು ಮೇ 2026 ರ ಸುಮಾರಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈಗಾಗಲೇ 100 ಹೊಸ MEMU ರೈಲುಗಳನ್ನು ತಯಾರಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಇಲ್ಲಿದೆ ನೋಡಿ ಪೋಸ್ಟ್:
Had a productive meeting with the Hon’ble Union Minister for Railways, Shri. @AshwiniVaishnaw ji in New Delhi.
Discussed various ongoing and proposed development initiatives in Telangana. Shri Vaishnaw ji shared that the GoI is set to introduce new generation Mainline Electric… pic.twitter.com/lFWdfBKii1
— G Kishan Reddy (@kishanreddybjp) June 25, 2025
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರೈಲುಗಳಲ್ಲಿ 8-12 ಬೋಗಿಗಳಿಗೆ ಹೋಲಿಸಿದರೆ ಈ ರೈಲುಗಳು 16-20 ಬೋಗಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ದೂರದ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗುತ್ತವೆ. ಇದು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚಿನ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು. ಇನ್ನು ಅಹಮದಾಬಾದ್-ಭುಜ್ ಮತ್ತು ಜಯನಗರ-ಪಾಟ್ನಾ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಎರಡು ನಮೋ ಭಾರತ್ ರೈಲುಗಳಿಗೆ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದರಿಂದ, ಅವುಗಳಲ್ಲಿ ಇನ್ನೂ 50 ರೈಲುಗಳನ್ನು ತಯಾರಿಸಲಾಗುವುದು ಎಂದು ವೈಷ್ಣವ್ ಹೇಳಿದರು. ಇದರ ಜತೆಗೆ ನಮೋ ಭಾರತ್ ರೈಲುಗಳು ಕಡಿಮೆ ದೂರದ ಪ್ರಯಾಣಕ್ಕೆ ಸಿದ್ಧವಾಗಿದೆ, ವಿಶೇಷವಾಗಿ ಇಂಟರ್‌ಸಿಟಿ ಮಾರ್ಗಗಳಿಗೆ ಸೂಕ್ತವಾಗಿದ್ದು, ಸಂಪೂರ್ಣ ಎಸಿ ರೈಲುಗಳಾಗಿವೆ.ಮುಂದಿನ ದಿನಗಳಲ್ಲಿ 150 ಹೊಸ ಪ್ರಯಾಣಿಕ ರೈಲುಗಳನ್ನು ಪ್ರಾರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು
ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಸಾಮಾನ್ಯ ಬೋಗಿಗಳನ್ನು ಪರಿಚಯಿಸುವ ಅಭಿಯಾನವು ಎರಡೂವರೆ ವರ್ಷಗಳಿಂದ ಮಾಡಲಾಗುತ್ತಿದೆ. ಈ ಹಿಂದೆ ಇಂತಹ ಬದಲಾವಣೆಗಳನ್ನು ತರಲಾಗಿದೆ. 2024-25ರಲ್ಲಿ, ಭಾರತದಲ್ಲಿ ಸುಮಾರು 720 ಕೋಟಿ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಇನ್ನು ಅಮೃತ್ ಭಾರತ್ ರೈಲು ಕೂಡ ತುಂಬಾ ಯಶಸ್ವಿಯಾಗಿದೆ. ಪ್ರಸ್ತುತ ಮೂರು ಅಮೃತ್ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಗೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಆರು ರೈಲುಗಳನ್ನು ಪ್ರಾರಂಭಿಸಲಾಗುವುದು. ಇನ್ನೂ 50 ರೈಲುಗಳ ಉತ್ಪಾದನೆ ನಡೆಯುತ್ತಿದೆ ಎಂದು ಹೇಳಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Wed, 25 June 25








