ದೇವರ ನಾಡಿನ ಕೊಟ್ಟಿಯೂರು ದೇವಸ್ಥಾನದ ವಿಶೇಷತೆ ಏನು? ಇಲ್ಲಿದೆ ಪೌರಾಣಿಕ ಕಥೆ
ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಪ್ರಭಾವಿಯಾಗಿರಲಿ, ಹಣವಂತನಾಗಿರಲಿ. ಆದ್ರೆ ಯಾರೂ ಕೂಡ ಕಷ್ಟ ಕೋಟಲೆ ಸಮಸ್ಯೆ ಸಂಕಷ್ಟಗಳಿಂದ ಮುಕ್ತವಾಗಿರೋದಿಲ್ಲ. ಹೀಗೆ ಕಷ್ಟಗಳು ಬಂದಾಗ ಆ ವ್ಯಕ್ತಿ ಮೊರೆ ಹೋಗುವುದೇ ದೇವರಿಗೆ. ಅದರಂತೆ ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಸಹ ಕಳೆದೆರಡು ವರ್ಷಗಳಲ್ಲಿ ಅನುಭಿಸಲಾರದ ಕಷ್ಟ ಅನುಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಸುತ್ತದ ದೇವಸ್ಥಾನಗಳಿಲ್ಲ.ಅದರಲ್ಲೂ ಇತ್ತೀಚೆಗೆ ದರ್ಶನ್ ಕುಟುಂಬ ಸಮೇತ ಭೇಟಿ ಕೊಟ್ಟಿದ್ದು ಕೇರಳದ ಆ ಒಂದು ಅತಿ ವಿಶಿಷ್ಟ ದೇವಸ್ಥಾನಕ್ಕೆ . ಹಾಗಾದ್ರೆ, ದರ್ಶನ್ ಭೇಟಿ ನೀಡಿದಂತಹ ಆ ದೇವಸ್ಥಾನದ ವಿಶೇಷತೆ ಏನು? ಯಾವ ದೇವರಿಗೆ ಅಲ್ಲಿ ಪೂಜೆ ಪುನಸ್ಕಾರಗಳಿರುತ್ತವೆ. ಆ ದೇವಸ್ಥಾನದ ಪೌರಣಿಕ ಹಿನ್ನೆಲೆ ಏನು ಎನ್ನುವುದನ್ನು ನೋಡಿದರೆ ತುಂಬಾ ಕುತೂಹಲಕಾರಿಯಾಗಿದೆ.

ಕೇರಳದ (Kerala) ಕಣ್ಣುರು ಜಿಲ್ಲೆಯ ಬೆಟ್ಟಗುಡ್ಡಗಳ ಮಧ್ಯೆ ಅಂಕು ಡೊಂಕಾಗಿ ಹಚ್ಚ ಹಸಿರ ಪ್ರಕೃತಿ ಮಧ್ಯೆ ಸಾಗೋ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಕೊಟ್ಟಿಯೂರು ದೇವಸ್ಥಾನ (Akkare Kottiyoor temple) ಸಿಗುತ್ತದೆ. ಇಲ್ಲಿ ಎರಡು ದೇವಸ್ಥಾನವಿದೆ. ಒಂದು ಇಕ್ಕರೆ ಕೊಟ್ಟಿಯೂರು ಮತ್ತಿನ್ನೊಂದು ಅಕ್ಕರೆ ಕೊಟ್ಟಿಯೂರು. ಇಕ್ಕರೆ ಕೊಟ್ಟಿಯೂರು (Kottiyoor) ವರ್ಷದ 11 ತಿಂಗಳೂ ತೆರೆದಿರುತ್ತದೆ. ಆದ್ರೆ ಅಕ್ಕರೆ ಕೊಟ್ಟಿಯೂರು ವರ್ಷದಲ್ಲಿ ಕೇವಲ 28 ದಿನಗಳು ಮಾತ್ರ ತೆರೆದಿರುತ್ತದೆ. ಈ ದೇವಸ್ಥಾನವೇ ತನ್ನ ವಿಶಿಷ್ಟ ನೆಲೆ, ಭಾವನೆ ಮತ್ತು ಸರಳತೆಯಿಂದಾಗಿ ಕೇರಳದಲ್ಲಿ ಮನೆ ಮಾತಾಗಿದೆ. ಇದು ಮೂಲತಃ ಮುಕ್ಕಣ್ಣ ಶಿವನ ಆಲಯ. ಜೊತೆಗೆ ಇಲ್ಲಿ ಶಿವನ ಜೊತೆಗೆ ಆತನ ಪತ್ನಿ, ಪಾರ್ವತಿಯ ಮತ್ತೊಂದು ಅವತಾರ ಎಂದು ನಂಬಲಾಗುವ ಸತಿದೇವಿ ಅಥವಾ ದಾಕ್ಷಾಯಣಿದೇವಿ ಮತ್ತು ಬ್ರಹ್ಮ ಹಾಗೂ ವಿಷ್ಣುವನ್ನೂ ಇಲ್ಲಿ ಆರಾಧಿಸಲಾಗುತ್ತದೆ. ಆದ್ರೆ ಪ್ರಮುಖವಾಗಿ ಇಲ್ಲಿ ಶಿವನೇ ಆರಾಧ್ಯ ದೈವ.
ದಂಪತಿ ಕಷ್ಟ ನೀಗಿಸುತ್ತೇನೆ ಎಂದ ಶಿವ
ಪುರಾಣ ಕತೆಗಳಲ್ಲಿ ಬರುವ ದಕ್ಷಯಾಗ ನಡೆದಿದ್ದು ಇಲ್ಲೇ ಮತ್ತು ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆಮಾಡಿಕೊಂಡಳು ಎಂಬ ಪ್ರತೀತಿ ಇದೆ. ಆ ಯಜ್ಞ ನಡೆದ ಸ್ಥಲವೇ ಇದು ಎಂಬುದು ಇಲ್ಲಿನ ಪ್ರತೀತಿ. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ಬಂದು ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಅಂದು ಆಶೀರ್ವಾದ ಮಾಡಿದ್ದನಂತೆ.
ಇದನ್ನೂ ಓದಿ: ಕೇರಳದ ಮತ್ತೊಂದು ದೇವಸ್ಥಾನಕ್ಕೆ ದರ್ಶನ್ ಭೇಟಿ, ಏನಿದರ ವಿಶೇಷತೆ?
ವೈಶಾಖ ಮಾಸದಲ್ಲಿ ಮಾತ್ರ ದೇಗುಲ ಓಪನ್
ಈ ದೇವಾಲಯಕ್ಕೆ ಯಾವುದೇ ಶಾಶ್ವತ ರಚನೆಗಳಿಲ್ಲ. ಅಂದ್ರೆ ಕಟ್ಟಡಗಳಿಲ್ಲ. ಪ್ರತಿ ವರ್ಷ ವೈಶಾಖ ಮಾಸ ಯಾವಾಗ ಬರುತ್ತದೋ ಆ ಮಾಸದಲ್ಲಿ ಮಾತ್ರ ಈ ದೇವಸ್ಥಾನ 28 ದಿನಗಳ ಕಾಲ ಭಕ್ತರಿಗೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ಎಲ್ಲಾ ದಿನಗಳಲ್ಲಿ ಇಲ್ಲಿಗೆ ಯಾರಿಗೂ ಪ್ರವೇಶವಿಲ್ಲ. ಆ ಸಂದರ್ಭ ಇಲ್ಲಿ ಗಿಡಗಂಟಿಗಳು ಬೆಳೆಯುತ್ತವೆ. ಮತ್ತೆ ಮುಂದಿನ ವರ್ಷ ವೈಶಾಖ ಮಾಸ ಬಂದಾಗ ಇಲ್ಲಿಗೆ ಆಗಮಿಸುವ ಕೇರಳದ ನಿರ್ಧಿಷ್ಟ ಕೆಲವು ಸಮುದಾಯದ ಜನರು ಇಲ್ಲಿ ಎಲ್ಲವನ್ನೂ ಸ್ವಚ್ಛಮಾಡಿ ತೆಂಗಿನ ಗರಿಗಳ ತಾತ್ಕಾಲಿಕ ದೇವಸ್ಥಾನ ನಿರ್ಮಿಸುತ್ತಾರೆ. ಈ ದೇವಸ್ಥಾನದ ಒಳಗಡೆ ದೀಪ ಹಚ್ಚಚುತ್ತಾರೆ. ಅಲ್ಲೊಂದು ಉದ್ಭವ ಶಿವಲಿಂಗ ಇದ್ದು ಅದರ ದರ್ಶನವನ್ನ ಜನರು ಪಡೆತ್ತಾರೆ. ಹರಕೆ ಹೊರುವವರು ಈ ಶೇಡ್ ಮಾದರಿಯ ದೇವಸ್ಥಾನದ ಒಳಗೆ ಹೋಗಿ ಬೆಳ್ಳಿಕೊಡ ಸಮರ್ಪಣೆ ಮತ್ತು ಸ್ವರ್ಣ ಕೊಡೆ ಸಮರ್ಪಣೆ ಮಾಡ್ತಾರೆ.
ನದಿಯಲ್ಲಿ ಮುಳುಗೆದ್ದು ಹೋಗುವ ಭಕ್ತರು
ಈ ದೇವಾಲಯ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡಗಳ ಮಧ್ಯೆ ಇದೆ, ಹಾಗಾಗಿ ಬೆಟ್ಟದ ಮೇಲಿನಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ಈ ದೇವಸ್ಥಾನದ ಆವರಣದಲ್ಲೇ ಭಕ್ತರ ಕಾಲಿಗೆ ಮುತ್ತಿಕ್ಕಿ ಹರಿಯುತ್ತದೆ. ಹಾಗಾಗಿ ಭಕ್ತರು ಕೂಡ ಆ ತಣ್ಣಗಿನ ನೀರಲ್ಲಿ ಹೆಜ್ಜೆ ಹಾಕುತ್ತಾ ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಮುಖ್ಯ ರಸ್ತೆಯಿಂದ ಅಂದಾಜು ಅರ್ಧ ಕಿಲೋ ಮೀಟರ್ನಷ್ಟು ಈ ದೇವಸ್ಥಾನಕ್ಕೆ ನಡೆಯಬೇಕಾಗುತ್ತದೆ. ಹಾದಿಯಲ್ಲಿ ಎರಡು ನದಿಯನ್ನು ದಾಟಬೇಕು. ಬಾವಲಿ ನದಿಯಲ್ಲಿ ಮೂರು ಬಾರಿ ಮುಳುಗೆದ್ದು ಭಕ್ತರು ದೇವಸ್ಥಾನದತ್ತ ಹೆಜ್ಜೆ ಇಡುತ್ತಾರೆ.
ಈ ಕ್ಷೇತ್ರದಲ್ಲೀ ಏನೋ ವಿಶೇಷತೆ ಸೆಳೆತ, ಶಕ್ತಿ
ಬೆಳಗ್ಗೆ 5 ಗಂಟೆಯಿಂದ ಈ ದೇವಸ್ಥಾನ ರಾತ್ರಿ 10 ಗಂಟೆಯವರೆಗೂ ತೆರೆದಿರುತ್ತದೆ. ದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಆಗಮಿಸ್ತಾರೆ. ಒಟ್ಟು 28 ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದ್ರೂ ಕೂಡ ಎಲ್ಲಿಯೂ ಗಜಿ ಬಿಜಿ, ಅವ್ಯವಸ್ಥೆ ಇಲ್ಲ. ಆಯಾಸ ಇಲ್ಲ. ಎಲ್ಲವೂ ಸುಸೂತ್ರವಾಗಿಯೇ ನೆರವೇರುತ್ತದೆ. ಬಹಳಷ್ಟು ಮಂದಿ ಹಲವು ವರ್ಷಗಳಿಂದ ಇಲ್ಲಿಗೆ ಭೇಟಿ ನೀಡಿದ್ರೆ ಇನ್ನೊಂದಷ್ಟು ಮಂದಿ ಕುತೂಹಲಕ್ಕೆ ಇಲ್ಲಿಗೆ ಆಗಮಿಸ್ತಾರೆ. ಆದ್ರೆ ಒಮ್ಮೆ ಇಲ್ಲಿಗೆ ಆಗಮಿಸಿ ಶಿವನ ದರ್ಶನ ಪಡೆದ ಬಳಿಕ ಅವರೂ ಮಂತ್ರಮುಗ್ದರಾದಂತೆ ಶಿವನ ಭಕ್ತರಾಗ್ತಾರೆ. ಈ ಕ್ಷೇತ್ರದಲ್ಲೀ ಏನೋ ವಿಶೇಷತೆ ಇದೆ, ಸೆಳೆತ ಇದೆ, ಶಕ್ತಿ ಇದೆ, ಭಕ್ತಿ ಇದೆ ಅಂತಾರೆ ಭಕ್ತರು.
ದಿನಕ್ಕೆ ಎರಡು ಶೀವೇಲಿ ಆಚರಣೆ
ಈ ಕೊಟ್ಟಿಯೂರು ಕ್ಷೇತ್ರ ಮತ್ತೊಂದು ವಿಶೇಷತೆ ಅಂದ್ರೆ ಇಲ್ಲಿ ದಿನಕ್ಕೆ ಎರಡು ಶೀವೇಲಿ ಆಚರಣೆ ನಡೆಯುತ್ತದೆ. ಅಂದ್ರೆ ಎರಡು ಆನೆಗಳನ್ನ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಇದು ಶಿವ ಮತ್ತು ಪಾರ್ವತಿಯ ಸ್ವರೂಪ ಎಂದೇ ಭಕ್ತರು ನಂಬಲಾಗಿದೆ. ಹೀಗೆ ಕೊಟ್ಟಿಯೂರ ಶ್ರೀ ಕ್ಷೇತ್ರ ಹತ್ತು ಹಲವು ವಿಶಿಷ್ಟ ಆಚರಣೆಗಳ ತವರೂರಾಗಿದೆ.



