India’s Power: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು
Power generation capacity growth in India: ಕಳೆದ ಐದು ವರ್ಷದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ದೇಶಗಳ ಸಾಲಿನಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ಚೀನಾ, ಅಮೆರಿಕ ನಂತರ ಭಾರತವು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಅತಿ ಹೆಚ್ಚಳ ಕಂಡಿದೆ ಎಂದು ಐಇಎ ಹೇಳಿದೆ. ಭಾರತದಲ್ಲಿ ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಸ್ಥಳ, ಎಸಿ, ಗೃಹೋಪಕರಣ, ಕೈಗಾರಿಕೆಗಳು ವಿದ್ಯುತ್ಗೆ ಬೇಡಿಕೆ ಹೆಚ್ಚಿಸಿವೆ.

ನವದೆಹಲಿ, ಜೂನ್ 20: ಭಾರತದಲ್ಲಿ ಬಹಳ ವೇಗವಾಗಿ ಇಂಧನ ಉತ್ಪಾದನೆ ಸಾಮರ್ಥ್ಯ (Power generation capacity) ಹೆಚ್ಚಳ ಆಗುತ್ತಿದೆ. ಅಂತಾರಾಷ್ಟ್ರೀಯ ಇಂಧನ ಏಜೆನ್ಸಿ (IEA- International Energy Agency) ಪ್ರಕಾರ ಕಳೆದ ಐದು ವರ್ಷದಲ್ಲಿ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಳದಲ್ಲಿ ಜಾಗತಿಕವಾಗಿ ಭಾರತ ಮೂರನೇ ಸ್ಥಾನ ಪಡೆದಿದೆ. ಚೀನಾ ಮತ್ತು ಅಮೆರಿಕ ಈ ಅವಧಿಯಲ್ಲಿ ಅತಿಹೆಚ್ಚು ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡಿವೆ. ಇವೆರಡು ದೇಶಗಳು ಒಟ್ಟಾರೆ ಇಂಧನ ಉತ್ಪಾದನಾ ಸಾಮರ್ಥ್ಯದಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಭಾರತ ಮೂರನೇ ಸ್ಥಾನದಲ್ಲಿದೆ. ಇಂಧನ ಸಾಮರ್ಥ್ಯ ಹೆಚ್ಚಳದಲ್ಲೂ ಭಾರತ ತನ್ನ ಸ್ಥಾನ ಉಳಿಸಿಕೊಂಡಿದೆ.
ಭಾರತದಲ್ಲಿ ಕಳೆದ ಐದು ವರ್ಷದಲ್ಲಿ ಎಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಏರಿಕೆ ಆಗಿದೆ ಎನ್ನುವ ಮಾಹಿತಿಯನ್ನು ಐಇಎ ತನ್ನ ವರದಿಯಲ್ಲಿ ನೀಡಿಲ್ಲ. ಆದರೆ, ಭಾರತದಲ್ಲಿ ಇಂಧನ ಅಥವಾ ವಿದ್ಯುತ್ಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಇದು ಗುರುತಿಸಿದೆ.
ಇದನ್ನೂ ಓದಿ: QS World University Rankings: ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್
ವಾಣಿಜ್ಯ ಮತ್ತು ವಸತಿ ಸ್ಥಳಗಳು ಹೆಚ್ಚುತ್ತಿರುವುದು, ಹವಾ ನಿಯಂತ್ರಕಗಳ ಅಳವಡಿಕೆ ಹೆಚ್ಚುತ್ತಿರುವುದು, ಗೃಹೋಪಯೋಗಿ ಉಪಕರಣಗಳ ಬಳಕೆ ಹೆಚ್ಚುತ್ತಿರುವುದು, ಕೈಗಾರಿಕೆಗಳಿಂದ ಬೇಡಿಕೆ ಹೆಚಚುತ್ತಿರುವುದು ಇವೇ ಮುಂತಾದ ಪ್ರಮುಖ ಕಾರಣಗಳಿಂದ ಭಾರತದಲ್ಲಿ ವಿದ್ಯುತ್ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳದಲ್ಲಿ ಸೌರಶಕ್ತಿ ಪಾಲು ಹೆಚ್ಚು
ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಸಾಂಪ್ರದಾಯಿಕವಾಗಿ ಕಲ್ಲಿದ್ದಲು ಮೂಲವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಪರ್ಯಾಯ ಮತ್ತು ಸ್ವಚ್ಛ ಇಂಧನ ಉತ್ಪಾದನೆಗೆ ಒತ್ತು ಕೊಡುತ್ತಿದೆ. ಅದರಲ್ಲೂ ಸೌರ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ. ಐಇಎ ವರದಿ ಪ್ರಕಾರ ಕಳೆದ ಐದು ವರ್ಷದಲ್ಲಿ ಭಾರತದಲ್ಲಿ ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಮಾಡಲಾಗಿರುವ ಹೂಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಮೊತ್ತವು ಸೌರಶಕ್ತಿ ಉತ್ಪಾದನೆಗೆ ವಿನಿಯೋಗ ಆಗಿದೆ. 2024ರಲ್ಲಂತೂ ವಿದ್ಯುತ್ ಕ್ಷೇತ್ರದಲ್ಲಿನ ಶೇ. 83ರಷ್ಟು ಹೂಡಿಕೆಯು ಸ್ವಚ್ಛ ಇಂಧನ ತಯಾರಿಕೆಗೆ ಹೋಗಿದೆ.
ಇದನ್ನೂ ಓದಿ: ಗ್ಲೋಬಲ್ ಸಮಿಟ್ನಲ್ಲಿ IMEC ಬಗ್ಗೆ ಚರ್ಚೆ; ಭಾರತಕ್ಕೆ ಈ ಕಾರಿಡಾರ್ ವರದಾನ ಹೇಗೆ?
ಅತಿಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶಗಳು (2023ರ ದತ್ತಾಂಶ)
- ಚೀನಾ: 9,456 ಟಿಡಬ್ಲ್ಯುಎಚ್ (ಟೆರಾ ವ್ಯಾಟ್ ಅವರ್)
- ಅಮೆರಿಕ: 4,254 TWh
- ಭಾರತ: 1,958 TWh
- ರಷ್ಯಾ: 1,178 TWh
- ಜಪಾನ್: 1,013 TWh
- ಬ್ರೆಜಿಲ್: 710 TWh
- ಕೆನಡಾ: 633 TWh
- ಸೌತ್ ಕೊರಿಯಾ: 618 TWh
- ಫ್ರಾನ್ಸ್: 518 TWh
- ಜರ್ಮನಿ: 497 TWh
ಈ ಮೇಲಿನ ಅಂಕಿ ಅಂಶವು ಒಟ್ಟಾರೆ ವಿದ್ಯುತ್ ಉತ್ಪಾದನೆಯ ಲೆಕ್ಕ ಹೇಳುತ್ತದೆ. ಇದರಲ್ಲಿ ಕಲ್ಲಿದ್ದಲು, ಜಲವಿದ್ಯುತ್, ಪರಮಾಣು, ಸೌರಶಕ್ತಿ, ವಾಯುಶಕ್ತಿ, ಜೈವಿಕ ಇಂಧನ ಇತ್ಯಾದಿ ಎಲ್ಲಾ ಶಕ್ತಿಮೂಲಗಳಿಂದ ಉತ್ಪಾದಿಸಲಾಗುವ ವಿದ್ಯುತ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Fri, 20 June 25