ಭರ್ಜರಿ ವೀವ್ಸ್ ಕೊಟ್ಟ ಆರ್ಸಿಬಿ; ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ; ಬೇರೆ ಕ್ರೀಡೆಗಳಿಗೆ ಇರೋ ವೀಕ್ಷಕರ ಬಳಗ ಎಷ್ಟು?
Comparing IPL viewership with FIFA and FIBA world cups: 18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವೀಕ್ಷಿಸಿದವರ ಸಂಖ್ಯೆ 100 ಕೋಟಿ ದಾಟಿದೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆಯನ್ನು ಈ ಟೂರ್ನಿ ಪಡೆದಿದೆ. ಫುಟ್ಬಾಲ್ಗೆ ಹೋಲಿಸಿದರೆ ಐಪಿಎಲ್ ಟೂರ್ನಿಗೆ ಕಡಿಮೆ ವೀಕ್ಷಕರಿದ್ದರೂ ಒಂದು ದೇಶಕ್ಕೆ ಸೀಮಿತವಾದ ಟೂರ್ನಿಗೆ ಇಷ್ಟು ದೊಡ್ಡ ವೀಕ್ಷಣೆ ಸಿಕ್ಕಿದ್ದು ಗಮನಾರ್ಹ.

ಬೆಂಗಳೂರು, ಜೂನ್ 19: ಈ ಬಾರಿಯ ಟಾಟಾ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣವನ್ನೇ ನೀಡಿತು. ಐಪಿಎಲ್ನ ಎವರ್ಗ್ರೀನ್ ಫೇವರಿಟ್ ಟೀಮ್ ಎನಿಸಿದ ಆರ್ಸಿಬಿ ಈ ಸಲ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು ಮರೆಯಲಾಗದ ಸಂಗತಿ. ಈ ಬಾರಿಯ ಐಪಿಎಲ್ ಟೂರ್ನಿ (IPL 2025) ಒಂದು ಬಿಲಿಯನ್ ವೀಕ್ಷಕರನ್ನು (viewership) ಗಳಿಸಿದೆ. ಅಂದರೆ, ನೂರು ಕೋಟಿಗೂ ಅಧಿಕ ಜನರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ.
ಅಷ್ಟೇ ಅಲ್ಲ, ಟಿವಿ, ಡಿಜಿಟಲ್ ಇತ್ಯಾದಿ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಐಪಿಎಲ್ 2025 ಟೂರ್ನಿಯ ಪಂದ್ಯಗಳು ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದಿವೆ. ಅಂದರೆ, 84,000 ಕೋಟಿ ನಿಮಿಷ ಅಥವಾ 1,400 ಕೋಟಿ ಗಂಟೆಗಳ ವೀಕ್ಷಣೆ ಪಡೆದಿವೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ.
ಇದನ್ನೂ ಓದಿ: QS World University Rankings: ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್
ಐಪಿಎಲ್ ಪಂದ್ಯಗಳ ಪೈಕಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ (RCB Punjab Kings final IPL match) ನಡುವಿನ ಫೈನಲ್ ಪಂದ್ಯ ಅತಿಹೆಚ್ಚು ವೀಕ್ಷಣೆ ಪಡೆದಿದೆ. ಐಪಿಎಲ್ ಮಾತ್ರವಲ್ಲ, ಯಾವುದೇ ಟಿ20 ಪಂದ್ಯಕ್ಕೆ ಸಿಕ್ಕ ಅತಿಹೆಚ್ಚು ವೀಕ್ಷಣೆ. ಆ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್ಗಳಲ್ಲಿ 16.9 ಕೋಟಿ ವೀಕ್ಷಕರು ನೋಡಿದ್ದಾರೆ. ಒಟ್ಟು 1,500 ಕೋಟಿ ನಿಮಿಷಗಳಷ್ಟು ವೀಕ್ಷಣೆ ಪಡೆದಿದೆ.
ಐಪಿಎಲ್ 2025 ಟೂರ್ನಿಗೆ ಸಿಕ್ಕ 840 ಬಿಲಿಯನ್ ನಿಮಿಷಗಳ ವೀಕ್ಷಣೆಯಲ್ಲಿ ಟಿವಿ ವಾಹಿನಿಗಳ ಮೂಲಕ 456 ಬಿಲಿಯನ್ ನಿಮಿಷ ಲೈವ್ ವೀಕ್ಷಣೆ ಆಗಿದೆ. ಜಿಯೋಹಾಟ್ಸ್ಟಾರ್ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ 384.6 ಬಿಲಿಯನ್ ನಿಮಿಷಗಳ ವೀಕ್ಷಣೆ ಆಗಿದೆ.
ಬೇರೆ ಪ್ರಮುಖ ಕ್ರೀಡೆಗಳ ವೀವರ್ಶಿಪ್ ದಾಖಲೆ ಎಷ್ಟಿದೆ?
- ಐಪಿಎಲ್ 2025: 1 ಬಿಲಿಯನ್ ವೀಕ್ಷಕರು; 840 ಬಿಲಿಯನ್ ನಿಮಿಷಗಳ ವೀಕ್ಷಣೆ
- ಐಸಿಸಿ ವರ್ಲ್ಡ್ ಕಪ್ ಕ್ರಿಕೆಟ್ 2023: 1 ಟ್ರಿಲಿಯನ್ ನಿಮಿಷಗಳಷ್ಟು ವೀಕ್ಷಣೆ.
- ಫೀಫಾ ಫುಟ್ಬಾಲ್ ವರ್ಲ್ಡ್ ಕಪ್ 2022: ಟಿವಿಯಲ್ಲಿ 3.5 ಬಿಲಿಯನ್ ವೀಕ್ಷಕರು; ಫೈನಲ್ ಪಂದ್ಯವೊಂದಕ್ಕೇ 1.5 ಬಿಲಿಯನ್ ವೀಕ್ಷಕರು ಬಂದಿದ್ದಾರೆ.
- ಬ್ಯಾಸ್ಕೆಟ್ಬಾಲ್ ವರ್ಲ್ಡ್ ಕಪ್ 2019: ಟಿವಿಯಲ್ಲಿ 3 ಬಿಲಿಯನ್ ವೀಕ್ಷಕರು.
- ರಗ್ಬಿ ವರ್ಲ್ಡ್ ಕಪ್ 2023: 80 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡಕ್ಕೆ ಟಿಮ್ ಡೇವಿಡ್ ಎಂಟ್ರಿ..!
ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಕ್ರೀಡೆಗಳು ಕ್ರಿಕೆಟ್ಗಿಂತ ಹೆಚ್ಚು ಜನಪ್ರಿಯವಾಗಿವೆ. ಹೆಚ್ಚು ದೇಶಗಳಲ್ಲಿ ಇದನ್ನು ನೋಡುತ್ತಾರೆ. ಆದರೂ ಕೂಡ ಐಪಿಎಲ್ ಟೂರ್ನಿಗೆ ಇಷ್ಟು ಪ್ರಚಂಡ ವೀಕ್ಷಣೆ ಸಿಕ್ಕಿದ್ದು ಸಾಧಾರಣ ವಿಷಯವಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ