ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು

Edited By:

Updated on: Feb 03, 2026 | 5:10 PM

ಸಿದ್ದಾಪುರದಲ್ಲಿ ಫೆಬ್ರವರಿ 2, 2026 ರಂದು ನಡೆದ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಹಾಗೂ ಆಕೆಯ ತಂದೆ ಲೋಕನಾಥ್ ಚೌಳಪ್ಪ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ವಸಂತ್ ನಾಯ್ಕ್ ಮೃತಪಟ್ಟಿದ್ದಾರೆ. ತನಿಖೆ ಮುಂದುವರೆದಿದೆ.

ಸಿದ್ದಾಪುರ, ಫೆ.3: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಇಂದು (ಫೆಬ್ರವರಿ 2) ರಂದು ನಡೆದ ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಮತ್ತು ಆಕೆಯ ತಂದೆ ಲೋಕನಾಥ್ ಚೌಳಪ್ಪ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ವಸಂತ್ ನಾಯ್ಕ್ (43) ಮೃತಪಟ್ಟಿದ್ದು, ಮಹೇಶ್ ನಾಯ್ಕ್ (37) ಮತ್ತು ಕುಮಾರ್ (35) ಗಾಯಗೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಗುಣೇ ನಂಬರ್ 23/26 ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಇದು ಪೂರ್ವಯೋಜಿತ ಕೃತ್ಯ ಎಂದು ತಿಳಿದುಬಂದಿದೆ. ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳು ಕೂಡ ಬಂದಿದ್ದು, ಅವರ ಪಾತ್ರದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಅವರಗುಪ್ಪ ಗ್ರಾಮದ ನಿವಾಸಿ ಸಂಧ್ಯಾ ಅವರು ನೀಡಿದ ದೂರಿನಲ್ಲಿ, ತಮ್ಮ ಪತಿ ವಸಂತ್ ನಾಯ್ಕ್ ಅವರ ತಮ್ಮ ಮಹೇಶ್ ನಾಯ್ಕ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಮಹೇಶ್ ಅವರ ಪತ್ನಿ ಸುಚಿತ್ರಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಸುಮಶ್ರೀ ಮತ್ತು ಅಮೃತಾ ಆರು ತಿಂಗಳಿಂದ ಮಹೇಶ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರು ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಸುಮಶ್ರೀಗೆ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಅವರು ನೀನು ನಿನ್ನ ತಂದೆಯ ಬಳಿ ಹೋಗು, ಇಲ್ಲಿರಬೇಡ, ಇಲ್ಲದಿದ್ದರೆ ವಿಷ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರವನ್ನು ಸುಮಶ್ರೀ ತನ್ನ ತಂದೆ ಮಹೇಶ್‌ಗೆ ತಿಳಿಸಿದ್ದಳು. ತನ್ನ ಮಗಳನ್ನು ಕರೆತರಲು ಮಹೇಶ್ ನಾಯ್ಕ್ ತನ್ನ ಸಹೋದರ ವಸಂತ್ ನಾಯ್ಕ್ ಮತ್ತು ಅಕ್ಕಪಕ್ಕದ ಮನೆಯವರಾದ ಕುಮಾರ್ ಅವರೊಂದಿಗೆ ಸುಚಿತ್ರಾ ಇದ್ದ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಚೌಳಪ್ಪ, ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಇತರ ನಾಲ್ಕು ಮಂದಿ ಅಲ್ಲಿಗೆ ಆಗಮಿಸಿ ವಾಗ್ವಾದ ನಡೆಸಿದ್ದಾರೆ. ವಾಗ್ವಾದ ತಾರಕಕ್ಕೇರಿ ಹಲ್ಲೆ ನಡೆದಿದೆ.ಈ ಹಲ್ಲೆಯಲ್ಲಿ ವಸಂತ್ ನಾಯ್ಕ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ