Silver Price: 4 ಲಕ್ಷ ರೂಪಾಯಿ ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ? ಇಲ್ಲಿದೆ ತಜ್ಞರು ಕೊಟ್ಟ ಸಲಹೆ

Updated on: Jan 29, 2026 | 3:35 PM

Silver Rate Hike: ಬೆಳ್ಳಿ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಕೆಜಿಗೆ 4 ಲಕ್ಷ ರೂಪಾಯಿ ಗಡಿಯನ್ನು ದಾಟಿದೆ. ಈ ಸಂದರ್ಭದಲ್ಲಿ ಬೆಳ್ಳಿ ಮೇಲೆ ಹೂಡಿಕೆ ಮಾಡುವುದು ಸೂಕ್ತವಾ? ಮಾರುಕಟ್ಟೆ ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ ಮತ್ತು ಹೂಡಿಕೆ ಟಿಪ್ಸ್. ವಿಡಿಯೋ ನೋಡಿ.

ಪ್ರತಿ ಕೆಜಿ ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 4 ಲಕ್ಷ ರೂಪಾಯಿ ಗಡಿ ದಾಟಿದೆ. ಕೇವಲ ಎಂಟು ತಿಂಗಳ ಹಿಂದೆ (ಮೇ ಅಂತ್ಯದಲ್ಲಿ) ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ಇದ್ದ ಬೆಲೆ, ಈಗ ಸುಮಾರು 3 ಲಕ್ಷ ರೂಪಾಯಿಯಷ್ಟು ಏರಿಕೆಯಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು, ಅಮೆರಿಕ-ಚೀನಾ ಸುಂಕ ಸಮರ ಮತ್ತು ಗ್ರೀನ್‌ಲ್ಯಾಂಡ್ ವಿವಾದದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯನ್ನು ಆಯ್ದುಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಬೆಳ್ಳಿ ಅನಿವಾರ್ಯವಾಗಿದೆ. ವಿಶೇಷವಾಗಿ ಸೋಲಾರ್ ಪ್ಯಾನೆಲ್ ತಯಾರಿಕೆ, ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿ, ಸೆಮಿಕಂಡಕ್ಟರ್ ಮತ್ತು ಎಐ (AI) ಕ್ಷೇತ್ರದಲ್ಲಿ ಇದರ ಬಳಕೆ ಹೆಚ್ಚಾಗಿದೆ. ಕಳೆದ 4-5 ವರ್ಷಗಳಿಂದ ಬೆಳ್ಳಿ ಉತ್ಪಾದನೆಗಿಂತ ಬಳಕೆ ಹೆಚ್ಚಾಗಿದ್ದು, ಗಣಿಗಳಿಂದ ಸಿಗುವ ಬೆಳ್ಳಿ ಪ್ರಮಾಣ ಕಡಿಮೆಯಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿದಾಗ ವಿದೇಶಿ ಹೂಡಿಕೆದಾರರಿಗೆ ಬೆಳ್ಳಿ ಅಗ್ಗವಾಗಿ ಕಾಣುವುದರಿಂದ ಖರೀದಿ ಹೆಚ್ಚಾಗಿದೆ. ಇದೂ ಸಹ ಬೆಳ್ಳಿ ದರ ಏರಿಕೆಗೆ ಕಾರಣವಾಗಿದೆ.

ಬೆಳ್ಳಿ ಮೇಲೆ ಹೂಡಿಕೆದಾರರಿಗೆ ಸಲಹೆ

ಮಾರುಕಟ್ಟೆ ತಜ್ಞರ ಪ್ರಕಾರ, ಸದ್ಯಕ್ಕೆ ಬೆಲೆ ಬಹಳ ಗರಿಷ್ಠ ಮಟ್ಟದಲ್ಲಿದ್ದು, ಹೊಸದಾಗಿ ಹೂಡಿಕೆ ಮಾಡುವವರು ಮಾರುಕಟ್ಟೆ ಸ್ವಲ್ಪ ತಣ್ಣಗಾಗುವವರೆಗೆ ಕಾಯುವುದು ಸೂಕ್ತ. ಈಗಾಗಲೇ ಹೂಡಿಕೆ ಮಾಡಿದವರು ಲಾಭ ಪಡೆದುಕೊಳ್ಳಲು ಇದು ಉತ್ತಮ ಸಮಯವಾಗಿದೆ. ಭೌತಿಕ ಬೆಳ್ಳಿಗಿಂತ (ಬಾರ್ ಅಥವಾ ಕಾಯಿನ್) ಸಿಲ್ವರ್ ಇಟಿಎಫ್ (ETF) ಅಥವಾ ಡಿಜಿಟಲ್ ಸಿಲ್ವರ್ ಮೂಲಕ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ