ಮಂಗಳೂರು: ಫೆಬ್ರುವರಿ 22ರಂದು ಮಂಗಳೂರು ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಕನ್ಯಾಡಿ (Kanyadi) ಎಂಬಲ್ಲಿ ದಿನೇಶ್ (Dinesh) ಹೆಸರಿನ ದಲಿತ ವ್ಯಕ್ತಿಯ ಕೊಲೆಯಾಗಿತ್ತು. ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳ ಆಧಾರದಲ್ಲಿ ಮೃತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಭಜರಂಗದಳ ಸಹಸಂಚಾಲಕ ಭಾಸ್ಕರ್ ಧರ್ಮಸ್ಥಳ ಅವರ ಸಹೋದರ ಕೃಷ್ಣ ಡಿ (Krishna D) ಯನ್ನು ಬಂಧಿಸಿದ್ದರು. ದಿನೇಶ್ ದಲಿತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ಪರಿಶಿಷ್ಟ ವರ್ಗ ದೌರ್ಜನ್ಯ ಪ್ರಕರಣದಡಿಯಲ್ಲಿ ಅವರ ಕುಟುಂಬಕ್ಕೆ ರೂ. 8 ಲಕ್ಷ ಪರಿಹಾರದ ರೂಪದಲ್ಲಿ ಸಿಗೆಬೇಕಿತ್ತು ಆದರೆ, ಇದುವರೆಗೆ ಕೇವಲ ರೂ. 4,12,500 ಮಾತ್ರ ಸಿಕ್ಕಿದೆಯೆಂದು ದಿನೇಶ್ ಅವರ ಪತ್ನಿ ಕವಿತಾ (Kavita) ಹೇಳಿದರು. ಸರ್ಕಾರದಿಂದ ನಾವು ಕಡೆಗಣಿಸಿಲ್ಪಟ್ಟಿದ್ದೇವೆ. ಸಿಗಬೇಕಾದ ಪರಿಹಾರ ಇನ್ನೂ ಸಿಕ್ಕಿಲ್ಲ. ತನ್ನ ಪತಿಯ ಕೊಲೆ ನಡೆದ ಬಳಿಕ ಮಾಜಿ ಮತ್ತು ಹಾಲಿ ಶಾಸಕರಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧನಸಹಾಯ ಮಾಡಿದ್ದಾರೆ. ಆದರೆ, ಸರ್ಕಾರದಿಂದ ನೆರವು ಸಿಕ್ಕಿಲ್ಲ ಎಂದು ಕವಿತಾ ಹೇಳಿದರು.
ಶಿವಮೊಗ್ಗನಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾದ ಬಳಿಕ ಸರ್ಕಾರ ಅವರ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ಧನ ನೀಡಿದೆ. ಅವರ ಕುಟುಂಬ ಮಾತ್ರ ಹಿಂದೂ ನನ್ನ ಕುಟುಂಬ ಹಿಂದೂ ಅಲ್ಲವೇ? ಅಂತ ಕವಿತಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಘೋಷಣೆಯಾದ ಪರಿಹಾರದಲ್ಲೂ ಕೇವಲ ಅರ್ಧದಷ್ಟು ಮಾತ್ರ ನೀಡಲಾಗಿದೆ, ನನಗೆ ನ್ಯಾಯ ಬೇಕು ಎಂದು ಪತಿಯನ್ನು ಕಳೆದುಕೊಂಡು ತೀವ್ರ ಸ್ವರೂಪದ ದುಃಖದಲ್ಲಿರುವ ಕವಿತಾ ಹೇಳುತ್ತಾರೆ.
ತನಗೆ ನ್ಯಾಯ ಬೇಕು ಎಂದು ಅವರು ಹೇಳುವಾಗ ಅವರು ಜೈಲು ಸೇರಿದ್ದ ಹಂತಕ ಕೇವಲ 25 ದಿನಗಳಲ್ಲೇ ಜಾಮೀನು ಪಡೆದು ಆಚೆ ಬಂದು ಮೋಜು ಮಾಡುತ್ತಿರುವ ವಿಷಯವನ್ನು ಉಲ್ಲೇಖಿಸುತ್ತಾರೆ. ತಾನು ಗಂಡನನ್ನು ಕಳೆದುಕೊಂಡು ಮೂರು ಮಕ್ಕಳ ಪೋಷಣೆ ಮಾಡಲು ಹೆಣಗಾಡುತ್ತಿದ್ದರೆ, ಕೊಲೆಗಡುಕ ತನ್ನ ಕುಟುಂಬದೊಂದಿಗೆ ಸಂತೋಷವಾಗಿದ್ದಾನೆ ಎಂದು ಹೇಳುವ ಅವರು ತನಗೆ ನ್ಯಾಯ ಬೇಕು ಮತ್ತು ಹಂತಕನಿಗೆ ಶಿಕ್ಷೆಯಾಗಬೇಕು ಅನ್ನುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳದ ಕನ್ಯಾಡಿ ಬಳಿ ದಿನೇಶ್ ಕೊಲೆ ಪ್ರಕರಣ; ಟಿವಿ9ಗೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಲಭ್ಯ
Published On - 4:13 pm, Fri, 25 March 22