ಬೆಂಗಳೂರು: ಒಬ್ಬನನ್ನೇ ಮದುವೆಯಾಗಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಹೆಂಡತಿ
ಬೆಂಗಳೂರಿನ ಹೊಂಗಸಂದ್ರದಲ್ಲಿ 35 ವರ್ಷದ ಪ್ರಮೋದಾ ಎಂಬ ಮಹಿಳೆ ಬರ್ಬರವಾಗಿ ಕೊಲೆಯಾಗಿದ್ದಾರೆ. ಶಿರಸಿ ಮೂಲದ ಪ್ರಮೋದಾ ತನ್ನ ಪತಿಯಿಂದ ದೂರಾಗಿ ಒಂಟಿಯಾಗಿ ವಾಸವಾಗಿದ್ದರು. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬೊಮ್ಮನಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು, ನವೆಂಬರ್ 17: ಬೆಂಗಳೂರು ನಗರದ ಹೊಂಗಸಂದ್ರದಲ್ಲಿ 35 ವರ್ಷದ ಮಹಿಳೆ ಪ್ರಮೋದಾ ಬರ್ಬರವಾಗಿ ಕೊಲೆಯಾಗಿದ್ದಾರೆ. ಅನೈತಿಕ ಸಂಬಂಧವೇ ಈ ಭೀಕರ ಹತ್ಯೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರಮೋದಾ, ಗಾರ್ಮೆಂಟ್ಸ್‌ನಲ್ಲಿ ಉದ್ಯೋಗಿಯಾಗಿದ್ದು, ಸಹೋದರಿಯ ಗಂಡ ಸುರೇಶನನ್ನೇ ಮದುವೆಯಾಗಿದ್ದಳು. ಪ್ರಮೋದಾಳಿಗೆ ಇಬ್ಬರು ಮಕ್ಕಳು ಇದ್ದಾರೆ. ಕಳೆದ ಕೆಲವು ಸಮಯದಿಂದ ಪತಿಯಿಂದ ದೂರಾಗಿ ಪ್ರತ್ಯೇಕವಾಗಿ ವಾಸವಿದ್ದರು. ಕಳೆದ ಮೂರು ತಿಂಗಳಿನಿಂದ ಹೊಂಗಸಂದ್ರದ ಮುನಿಸುಬ್ಬ ರೆಡ್ಡಿ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ತಮ್ಮ ಪತಿಯಿಂದ ದೂರಾಗಿದ್ದ ಇವರು ಒಬ್ಬರೇ ವಾಸಿಸುತ್ತಿದ್ದರು. ಮಾರಕಾಸ್ತ್ರಗಳಿಂದ ಇರಿದು ಕೊಲೆಗೈಯಲಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಹಂತಕನ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
