ತಂದೆ ಪಿಂಚಣಿ ಹಣಕ್ಕಾಗಿ ತಂಗಿಗೆ ಅಣ್ಣಂದಿರ ಕಾಟ: ಗೃಹ ಬಂಧನದಲ್ಲಿರಿಸಿ ಹಿಂಸೆ?

Updated By: ಪ್ರಸನ್ನ ಹೆಗಡೆ

Updated on: Oct 19, 2025 | 7:42 PM

ತಂದೆಯ ಪಿಂಚಣಿ ಹಣದಾಸೆಗೆ ಒಡ ಹುಟ್ಟಿದ ತಂಗಿಯನ್ನೇ ಅಣ್ಣಂದಿರು ಗೃಹ ಬಂಧನದಲ್ಲಿ ಇರಿಸಿರುವ ಆರೋಪ ಕೇಳಿಬಂದಿದೆ. ಸಹೋದರರ ಕಣ್ತಪ್ಪಿಸಿ ಪೊಲೀಸ್​ ಠಾಣೆಗೆ ಬಂದ ಸಹೋದರಿಯೇ ಈ ಬಗ್ಗೆ ಆರೋಪ ಮಾಡಿದ್ದು, ತನ್ನ ಮೊಬೈಲ್, ಎಟಿಎಂ ಕಾರ್ಡ್, ಚಿನ್ನಾಭರಣ ಕಸಿದುಕೊಂಡಿದ್ದಾರೆ. ಅಲ್ಲದೆ 4 ತಿಂಗಳಿಂದ ಗೃಹಬಂಧನದಲ್ಲಿ ಇರಿಸಿರುವ ಬಗ್ಗೆ ಆರೋಪಿಸಿದ್ದಾಳೆ.

ಹಾವೇರಿ, ಅಕ್ಟೋಬರ್​ 19: ತಂದೆ ಪಿಂಚಣಿ ಹಣಕ್ಕಾಗಿ ಅಣ್ಣಂದಿರೇ ತಂಗಿಯನ್ನು ಗೃಹಬಂಧನದಲ್ಲಿರಿಸಿದ ಆರೋಪ ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕಿನ ಯಲವಗಿ ಗ್ರಾಮದಲ್ಲಿ ಕೇಳಿಬಂದಿದೆ. ಸಹೋದರರ ಕಣ್ಣುತಪ್ಪಿಸಿ ಪೊಲೀಸ್ ಠಾಣೆಗೆ ಬಂದಿರುವ ಬುಜಂಬಿ ಕೆ.ಕೋಟಿ ಎಂಬಾಕೆ ತನ್ನ ಸಹೋದರರಾದ ಸಂಶುದ್ದೀನ್ ಕೋಟಿ, ಮಾಬುಸಾಬ್ ಕಲಂದರ್ ಕೋಟಿ, ಜಮಾಲಸಾಬ್ ಕೋಟಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ತನ್ನ ಮೊಬೈಲ್, ಎಟಿಎಂ ಕಾರ್ಡ್, ಚಿನ್ನಾಭರಣ ಕಸಿದುಕೊಂಡಿದ್ದು, 4 ತಿಂಗಳಿಂದ ಗೃಹಬಂಧನದಲ್ಲಿ ಇರಿಸಿದ್ದಾರೆ. ನನ್ನ ಪಾಡಿಗೆ ಬದುಕಲು ಬಿಡಿ ಎಂದು ಗೋಳಾಡಿದ್ದಾರೆ. ಹಾವೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಲವತ್ತುಕೊಂಡಿರುವ ಬುಜಂಬಿ, ಅಣ್ಣಂದಿರಿಂದ ಆಗುತ್ತಿರುವ ಕಾಟ ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.