ಮೆಟ್ರೋ ಕಾಮಗಾರಿ ನಡೆಯುತ್ತಿರುವ ಟ್ಯಾನರಿ ರಸ್ತೆಯಲ್ಲಿ 30 ಅಡಿ ಮಣ್ಣು ಕುಸಿತ, ಪರಿಹಾರ ಕೇಳಿದ ಜಾಗದ ಮಾಲೀಕ

| Updated By: shruti hegde

Updated on: Oct 01, 2021 | 9:09 AM

ಟ್ಯಾನರಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳವೊಂದರಲ್ಲಿ ಗುರುವಾರ ಬೆಳಗಿನ ಜಾವ ಮಣ್ಣು ಕುಸಿದ ಘಟನೆ ಸಂಭವಿಸಿದೆ. ಗೊಟ್ಟಿಗೆರೆ-ನಾಗವಾರ ನಡುವೆ ಮೆಟ್ರೋ ಕಾಮಗಾರಿ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿದ್ದು ಅನಾಹುತ ನಡೆದ ಸ್ಥಳದಲ್ಲಿ ಸುರಂಗ ಕೊರೆಯುವ ಕಾರ್ಯ ಇತ್ತೀಚಿಗಷ್ಟೇ ಮುಕ್ತಾಯಗೊಂಡಿತ್ತು

ಬೆಂಗಳೂರು ನಗರ ಮತ್ತು ನಗರದ ಹೊರಗಡೆ ಕೆಲಭಾಗಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕೆಲಸಗಳು ಭರದಿಂದ ಸಾಗುತ್ತಿದ್ದರೆ, ಬೇರೆ ಕಡೆ ಹಲವು ಅಡಚಣೆಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ನಮಗೆಲ್ಲ ಗೊತ್ತಿರುವ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಆಗಾಗ ಅನಾಹುತಗಳು ಸಂಭವಿಸುತ್ತಿವೆ. ಕೆಲವು ಕಡೆ ಅಗೆತದಿಂದಾಗಿ ರಸ್ತೆ ಕುಸಿದಿರುವ ಘಟನೆ ನಡೆದಿದ್ದರೆ ಒಂದೆರಡು ಕಡೆ ಕೆಲಸ ನಡೆಯುವ ಪ್ರದೇಶದಲ್ಲಿರುವ ಮನೆ ಇಲ್ಲವೇ ಅಂಗಡಿ ಮುಂಗಟ್ಟುಗಳಲ್ಲಿ ಬಿರುಕು ಕಂಡಿರುವ ಪ್ರಸಂಗಗಳೂ ನಡೆದಿವೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಟ್ಯಾನರಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳವೊಂದರಲ್ಲಿ ಗುರುವಾರ ಬೆಳಗಿನ ಜಾವ ಮಣ್ಣು ಕುಸಿದ ಘಟನೆ ಸಂಭವಿಸಿದೆ. ಗೊಟ್ಟಿಗೆರೆ-ನಾಗವಾರ ನಡುವೆ ಮೆಟ್ರೋ ಕಾಮಗಾರಿ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿದ್ದು ಅನಾಹುತ ನಡೆದ ಸ್ಥಳದಲ್ಲಿ ಸುರಂಗ ಕೊರೆಯುವ ಕಾರ್ಯ ಇತ್ತೀಚಿಗಷ್ಟೇ ಮುಕ್ತಾಯಗೊಂಡಿತ್ತು. ಅದನ್ನು ಕೊರೆದಿರುವ ಸ್ಥಳದಲ್ಲೇ ಸುಮರು 30 ಅಡಿಗಳಷ್ಟು ಮಣ್ಣು ಕುಸಿದಿದೆ.

ಸ್ಥಳೀಯರು ಮತ್ತು ಮಣ್ಣು ಕುಸಿತ ಕಂಡಿರುವ ಸ್ಥಳದ ಮಾಲೀಕ ಮುಬೀನ್ ಹೇಳುವ ಹಾಗೆ ಮೊದಲು ಅಲ್ಲೊಂದು ಬಾವಿಯಿತ್ತು ಮತ್ತು ಅದನ್ನು ಮುಚ್ಚಲಾಗಿತ್ತು. ಸುರಂಗ ಕೊರೆಯುವಾಗ ಸುತ್ತಮುತ್ತಲಿನ ಜಾಗ ಶಿಥಿಲಗೊಂಡಿದ್ದರಿಂದ ಮಣ್ಣು ಕುಸಿದಿದೆ ಎಂದು ಹೇಳಿರುವ ಮುಬೀನ್, ಬೆಂಗಳೂರು ಮೆಟ್ರೋ ರೇಲ್ ಕಾರ್ಪೊರೇಷನ್ (ಬಿ ಎಮ್ ಆರ್ ಸಿ ಎಲ್) ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

ತನಗಾಗಿರುವ ನಷ್ಟವನ್ನು ಬಿ ಎಮ್ ಆರ್ ಸಿ ಎಲ್ ಭರಿಸಿಕೊಡಬೇಕು ಇಲ್ಲವೇ ಪರಿಹಾರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ; ಠಾಣೆಯಲ್ಲಿ ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್