ಸಚಿವಾಕಾಂಕ್ಷಿಗಳ ರೇಸ್​ನಲ್ಲಿ ಸೋಮಶೇಖರ್ ರೆಡ್ಡಿ, ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 25, 2022 | 7:20 PM

ರೆಡ್ಡಿ ಸಾಮಾನ್ಯವಾಗಿ ಲೈಮ್ ಲೈಟ್ ಕಾಣದಿರುವ ವ್ಯಕ್ತಿ. ಕೆಲ ಸಮಯದ ಹಿಂದೆ ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳನ್ನು ನೀಡಿದ ಆರೋಪ ಇವರ ಮೇಲಿದೆ. ವರಿಷ್ಠರ ಗಮನ ಸೆಳೆಯಲು ಹಾಗೆ ಮಾಡಿದ್ದು ಎಂದು ಕಾಂಗ್ರೆಸ್ ಪಕ್ಷ ಟೀಕಿಸಿತ್ತು. ಅದಾದ ಮೇಲೆ ಅವರು ತೆರೆಮರೆಯಲ್ಲೇ ಉಳಿದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡುವ ಸುದ್ದಿ ಹಬ್ಬುತ್ತಿದ್ದಂತೆ, ಬಿಜೆಪಿಯ ಅನೇಕ ಶಾಸಕರು ಮಂತ್ರಿಯಾಗುವ ಕನಸು ಕಾಣಲಾರಂಭಿಸಿದ್ದಾರೆ. ಕೆಲವರು ವಶೀಲಿ ಮಾಡಿಸುವುದು ಆರಂಭಿಸಿದರೆ ಬೇರೆ ಕೆಲವರು ತಮ್ಮ ಇಷ್ಟದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹರಕೆ ಹೊರುತ್ತಿದ್ದಾರೆ. ವಿಧಾನ ಸಭೆಯಲ್ಲಿ ಬಳ್ಳಾರಿಯನ್ನು ಪ್ರತಿನಿಧಿಸುವ ಗಾಲಿ ಸೋಮಶೇಖರ ರೆಡ್ಡಿಯವರು (Gali Somashekhar Reddy) ಮಂತ್ರಿಯಾಗಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇವರ ಇಬ್ಬರು ಸಹೋದರರು ಗಾಲಿ ಕರುಣಾಕರ್ ರೆಡ್ಡಿ (Gali Karunaka Reddy) ಮತ್ತು ಇವರಿಬ್ಬರಿಗಿಂತ ಹೆಚ್ಚು ಜನಪ್ರಿಯ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಸಚಿವರಾಗಿ ಅಧಿಕಾರ ಅನುಭವಿಸಿದ್ದರೆ, ಸೋಮಶೇಖರ್ ರೆಡ್ಡಿ ಅವರಿಗೆ ಮಂತ್ರಿಭಾಗ್ಯ ಲಭಿಸಿಲ್ಲ. ಅವರು ಅಸಂಬ್ಲಿಗೆ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ.

ಮಂಗಳವಾರದಂದು ಸೋಮಶೇಖರ ರೆಡ್ಡಿ ತಮ್ಮ ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಬಳ್ಳಾರಿಯ ಸಂಡೂರಿನಲ್ಲಿರುವ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ದೇವಸ್ಥಾನಕ್ಕೆ ಐತಿಹಾಸಿಕ ಮಹತ್ವವಿದೆ ಮತ್ತು ಈ ಭಾಗದವರೇ ಆಗಿರುವ ಸಚಿವ ಬಿ ಶ್ರೀರಾಮುಲು ಅವರು ತಮ್ಮ ಸಂಕಷ್ಟ ಮತ್ತು ಇಷ್ಟಾರ್ಥ ನೆರವೇರಿಕೆಗಾಗಿ ಇದೇ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರಂತೆ.

ರೆಡ್ಡಿ ಸಾಮಾನ್ಯವಾಗಿ ಲೈಮ್ ಲೈಟ್ ಕಾಣದಿರುವ ವ್ಯಕ್ತಿ. ಕೆಲ ಸಮಯದ ಹಿಂದೆ ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳನ್ನು ನೀಡಿದ ಆರೋಪ ಇವರ ಮೇಲಿದೆ. ವರಿಷ್ಠರ ಗಮನ ಸೆಳೆಯಲು ಹಾಗೆ ಮಾಡಿದ್ದು ಎಂದು ಕಾಂಗ್ರೆಸ್ ಪಕ್ಷ ಟೀಕಿಸಿತ್ತು. ಅದಾದ ಮೇಲೆ ಅವರು ತೆರೆಮರೆಯಲ್ಲೇ ಉಳಿದಿದ್ದಾರೆ.

ಬೊಮ್ಮಾಯಿ ಮತ್ತು ಪಕ್ಷದ ಹಿರಿಯ ನಾಯಕರ ಕೃಪಾದೃಷ್ಟಿ ಅವರ ಮೇಲೆ ಬೀಳುತ್ತದೆಯೇ ಅನ್ನೋದನ್ನು ಕಾದು ನೋಡಬೇಕು.

ಇದನ್ನೂ ಓದಿ:   ಸಿನಿಮಾ ಶೂಟಿಂಗ್​ನಲ್ಲಿ ನಟಿ ರಮೋಲಾ ಬ್ಯುಸಿ; ವೈರಲ್​ ಆಗುತ್ತಿದೆ ಸಾಂಗ್​ ಶೂಟ್​ ವಿಡಿಯೋ