ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು: ಜೀವ ಹಂಗು ತೊರೆದು ಬಸ್ಸಿನಲ್ಲಿ ನೇತಾಡುತ್ತಿರುವ ಮಹಿಳೆಯರು, ವಿದ್ಯಾರ್ಥಿಗಳು

Edited By:

Updated on: Aug 20, 2026 | 11:59 AM

ಸೊರಬದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಕೊರತೆಯಿಂದ ಪ್ರತಿನಿತ್ಯ ಪರದಾಡುತ್ತಿದ್ದಾರೆ. ಕಿಕ್ಕಿರಿದ ಬಸ್‌ಗಳಲ್ಲಿ, ಬಾಗಿಲುಗಳಿಗೆ ನೇತಾಡುತ್ತಾ ಜೀವ ಪಣಕ್ಕಿಟ್ಟು ಪ್ರಯಾಣಿಸುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಿಂದ ಭೀಕರ ಅವಘಡ ಸಂಭವಿಸುವ ಭೀತಿ ಇದೆ. ಈ ಸಮಸ್ಯೆಗೆ ಪರಿಹಾರವಾಗಿ ಹೆಚ್ಚಿನ ಸರ್ಕಾರಿ ಬಸ್‌ಗಳನ್ನು ಓಡಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸಾರಿಗೆ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಸೊರಬ, ಆ.20: ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸ್ವಕ್ಷೇತ್ರವಾದ ಸೊರಬದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಬಸ್‌ಗಾಗಿ ತೀವ್ರ ಪರದಾಟ ನಡೆಸುವಂತಾಗಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಬಸ್ಸಿನ ಬಾಗಿಲಲ್ಲಿ ಜೀವ ಕೈಯಲ್ಲಿಡಿದು ನೇತಾಡುತ್ತಲೇ ಪ್ರಯಾಣಿಸುತ್ತಿರುವ ದೃಶ್ಯಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಸೊರಬ-ಸಾಗರ ಮಾರ್ಗದ ಬಸ್‌ನಲ್ಲಿ ಒಂದೇ ಬಾರಿಗೆ 100ಕ್ಕೂ ಹೆಚ್ಚು ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ಸಿನ ಬಾಗಿಲುಗಳಲ್ಲಿ ನೇತಾಡುತ್ತಲೇ ಶಾಲೆಗಳಿಗೆ ತೆರಳುತ್ತಿದ್ದು, ಭೀಕರ ಅವಘಡದ ಭೀತಿ ಎದುರಾಗಿದೆ. ಪ್ರಯಾಣಿಕರ ಅತಿಯಾದ ಹೊರೆಯಿಂದಾಗಿ ಬಸ್ ರಸ್ತೆಯಲ್ಲೇ ಒಂದು ಬದಿಗೆ ವಾಲಿಕೊಂಡು ಸಾಗುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆಯತಪ್ಪಿ ಬಿದ್ದರೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಪ್ರತಿನಿತ್ಯ ಕೆಲಸಕ್ಕೆ ತೆರಳುವ ಗಾರ್ಮೆಂಟ್ಸ್ ಉದ್ಯೋಗಿ ಮಹಿಳೆಯರಿಗೂ ಬಸ್ ಕೊರತೆಯಿಂದಾಗಿ ಪ್ರಯಾಣದ ನರಕಯಾತನೆ ತಪ್ಪಿಲ್ಲ. ಪ್ರತಿನಿತ್ಯದ ಈ ಸಮಸ್ಯೆಗೆ ತಕ್ಷಣವೇ ಮುಕ್ತಿ ನೀಡಲು ಈ ಭಾಗದಲ್ಲಿ ಹೆಚ್ಚಿನ ಸರ್ಕಾರಿ ಬಸ್‌ಗಳನ್ನು ಓಡಿಸಬೇಕೆಂದು ಶಿಕ್ಷಣ ಸಚಿವರು ಹಾಗೂ ಸಾರಿಗೆ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 20, 2026 11:58 AM
Loading...
Unable to load recommendations.
Follow Us