ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಹಾಡಿ ಹೊಗಳಿದರು!
ಪಿಎಸ್ಐ ನೇಮಕಾತಿ ಹಗರಣವನ್ನು ಮುಖ್ಯಮಂತ್ರಿಗಳು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದ ಕಟೀಲ್, ಹಗರಣದ ನಡೆದಿರುವ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಅವರು ತನಿಖೆಗೆ ಆದೇಶ ನೀಡಿ ಪ್ರತಿಯೊಬ್ಬ ತಪ್ಪಿತಸ್ಥನನ್ನು ಜೈಲಿಗೆ ಅಟ್ಟಿದ್ದಾರೆ, ಅವರನ್ನು ಕರ್ನಾಟಕದ ಬಿಜೆಪಿ ಘಟಕದ ವತಿಯಿಂದ ಅಭಿನಂದಿಸುತ್ತೇನೆ ಅಂತ ಭಾವಪರವಶತೆಗೆ ಒಳಗಾದವರಂತೆ ಹೇಳಿದರು.
Bengaluru: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶನಿವಾರ ನಿಜಕ್ಕೂ ನಿರಾಳರಾಗಿದ್ದರು ಮಾರಾಯ್ರೇ. ಕಳೆದೆರಡು ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅವರನ್ನು ಕಂಗೆಡಿಸಿ ಆತಂಕಕ್ಕೆ ದೂಡಿದ್ದವು. ವಿರೋಧ ಪಕ್ಷಗಳ ಟೀಕೆಗಳಿಂದ ಜರ್ಝರಿತರಾಗಿದ್ದರು. ಎಲ್ಲಕ್ಕೂ ಮಿಗಿಲಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ರೂಮರ್. ಆದರೆ, ಶನಿವಾರ ವಿರೋಧ ಪಕ್ಷಗಳ ಕೆಲ ನಾಯಕರು ಬಿಜೆಪಿ ಸೇರಿದ್ದು ಅವರಲ್ಲಿ ಉಲ್ಲಾಸವನ್ನು ತಂದಿತು. ಅವರಲ್ಲಿ ಹೆಚ್ಚಿನ ಚೈತನ್ಯ ಮತ್ತು ಲವಲವಿಕೆ ತುಂಬಿದ ಮತ್ತೊಂದು ಅಂಶವೆಂದರೆ ಪಕ್ಷ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಬೊಮ್ಮಾಯಿಯವರ ಆಡಳಿತ (governance), ಕಾರ್ಯವೈಖರಿ ಮತ್ತು ಕ್ಷಮತೆಯನ್ನು ಅನಿರ್ಬಂಧಿತವಾಗಿ ಹೊಗಳಿದ್ದು.
ಖುದ್ದು ಬೊಮ್ಮಯಿ ಮುಜುಗುರ ಅನುಭವಿಸುವಷ್ಟು ಶಹಾಬ್ಬಾಸ್ಗಿರಿಯನ್ನು ಕಟೀಲ್ ನೀಡಿದ್ದಾರೆ. ಶನಿವಾರ ಬೆಂಗಳೂರಲ್ಲಿ ಬಿಜೆಪಿ ಸೇರಿದ ಬೇರೆ ಬೇರೆ ಪಕ್ಷಗಳ ನಾಯಕರನ್ನು ಸ್ವಾಗತಿಸುವ ಸಂದರ್ಭದಲ್ಲಿ ಕಟೀಲ್ ಹೊಗಳಿಕೆಯ ಹೊಳೆ ಹರಿಸಿದರು.
ಪಿಎಸ್ಐ ನೇಮಕಾತಿ ಹಗರಣವನ್ನು ಮುಖ್ಯಮಂತ್ರಿಗಳು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದ ಕಟೀಲ್, ಹಗರಣದ ನಡೆದಿರುವ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಅವರು ತನಿಖೆಗೆ ಆದೇಶ ನೀಡಿ ಪ್ರತಿಯೊಬ್ಬ ತಪ್ಪಿತಸ್ಥನನ್ನು ಜೈಲಿಗೆ ಅಟ್ಟಿದ್ದಾರೆ, ಅವರನ್ನು ಕರ್ನಾಟಕದ ಬಿಜೆಪಿ ಘಟಕದ ವತಿಯಿಂದ ಅಭಿನಂದಿಸುತ್ತೇನೆ ಅಂತ ಭಾವಪರವಶತೆಗೆ ಒಳಗಾದವರಂತೆ ಹೇಳಿದರು.
ಬೊಮ್ಮಾಯಿ ಅವರು ತೋರಿದ ಧೈರ್ಯ ಸಿದ್ರಾಮಣ್ಣನವರಿಗೆ ತೋರಲಾಗಲಿಲ್ಲ. ಅವರ ಅಧಿಕಾರಾವಧಿಯಲ್ಲಿ, ಹಾಸಿಗೆ ಹಗರಣ, ದಿಂಬು ಹಗರಣ-ಹೀಗೆ ನೂರೆಂಟು ಹಗರಣಗಳು ನಡೆದವು. ಅವರ ಸಂಪುಟದಲ್ಲಿದ್ದ ಎಲ್ಲ ಸಚಿವರ ವಿರುದ್ಧ ಹಗರಣಗಳ ಆರೋಪಗಳಿದ್ದವು. ಒಂದು ಹಗರಣವನ್ನಾದರೂ ಅವರು ತನಿಖೆಗೆ ಆದೇಶ ನೀಡಿದರೆ? ಪೊಲೀಸ್ ಅಧಿಕಾರಿ ಗಣಪತಿ ಕೇಸಲ್ಲಿ ಗೃಹ ಸಚಿವ ಕೆಜೆ ಜಾರ್ಜ್ ಕೋರ್ಟ್ ಸೂಚನೆ ನೀಡಿದ ನಂತರ ರಾಜೀನಾಮೆ ನೀಡಿದರು, ಎಂದು ಕಟೀಲ್ ಹೇಳಿದರು.
ಬೊಮ್ಮಾಯಿ ಅವರು ಪಾರದರ್ಶಕವಾದ ಆಡಳಿತ ನೀಡುತ್ತಿದ್ದಾರೆ. ಅವರು ಮಂಡಿಸಿದ ಬಜೆಟ್ ಹಳ್ಳಿಗಳಲ್ಲೂ ಕೊಂಡಾಡಲಾಗುತ್ತಿದೆ. ಎಲ್ಲರಲ್ಲೂ ಬಿಜೆಪಿಯೆಡೆ ವಿಶ್ವಾಸ ಹೆಚ್ಚುತ್ತಿದೆ, ಪಕ್ಷದ ಧೋರಣೆಗಳಿಂದ ಆಕರ್ಷಿತರಾಗುತ್ತಿದ್ದಾರೆ, ಅದಕ್ಕೆ ಸಾಕ್ಷಿಯಾಗಿ ಇಂದು ಇಷ್ಟೆಲ್ಲಾ ನಮ್ಮ ಪಕ್ಷ ಸೇರಿದ್ದಾರೆ ಎಂದು ಕಟೀಲ್ ಹೇಳಿದರು.
ಇದನ್ನೂ ಓದಿ: ಪಕ್ಷದ ಕಾರ್ಯಕರ್ತರೇ ಪಕ್ಷದ ಬೆನ್ನಲುಬು, ಸಂಘಟನೆಯೇ ನಮ್ಮ ಪಕ್ಷದ ಬಲ: ಬಸವರಾಜ ಬೊಮ್ಮಾಯಿ