BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
Big Bash League 2024-25: ಬಿಗ್ ಬ್ಯಾಷ್ ಲೀಗ್ನ 35ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 20 ಓವರ್ಗಳಲ್ಲಿ 182 ರನ್ ಕಲೆಹಾಕಿದರೆ, ಈ ಗುರಿಯನ್ನು ಸಿಡ್ನಿ ಸಿಕ್ಸರ್ಸ್ ತಂಡವು 19.5 ಓವರ್ಗಳಲ್ಲಿ ಚೇಸ್ ಮಾಡಿ 3 ವಿಕೆಟ್ಗಳ ಜಯ ಸಾಧಿಸಿತು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಸ್ಟೀವ್ ಸ್ಮಿತ್ ಬೌಲ್ಡ್ ಆಗುವುದನ್ನು ತಪ್ಪಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಬಿಎಲ್ನ 35ನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಲು ಸಿಡ್ನಿ ಸಿಕ್ಸರ್ಸ್ ಪರ ಸ್ಟೀವ್ ಸ್ಮಿತ್ ಹಾಗೂ ಜೋಶ್ ಫಿಲಿಪ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಫಿಲಿಪ್ (8) ಬೇಗನೆ ಔಟಾದರೂ, ಮತ್ತೊಂದೆಡೆ ಸ್ಟೀವ್ ಸ್ಮಿತ್ ಕ್ರೀಸ್ ಕಚ್ಚಿ ನಿಂತಿದ್ದರು. ಆದರೆ ಸ್ಮಿತ್ ಪವರ್ ಪ್ಲೇನಲ್ಲೇ ಬೌಲ್ಡ್ ಆಗಬೇಕಿತ್ತು.
ಹೆನ್ರಿ ಥಾರ್ಟನ್ ಎಸೆದ 4ನೇ ಓವರ್ನಲ್ಲಿ ಸ್ಮಿತ್ ಸ್ವಲ್ಪದಲ್ಲೇ ಬೌಲ್ಡ್ ಆಗುತ್ತಿದ್ದರು. ಆದರೆ ಕ್ಷಣಾರ್ಧದಲ್ಲೇ ಚೆಂಡನ್ನು ತಡೆಯುವ ಮೂಲಕ ಸ್ಟೀವ್ ಸ್ಮಿತ್ ಬೇಗನೆ ಔಟ್ ಆಗುವುದನ್ನು ತಪ್ಪಿಸಿದರು. ಆ ಬಳಿಕ ಇನಿಂಗ್ಸ್ ಕಟ್ಟಿದ ಸ್ಟೀವ್ ಸ್ಮಿತ್ 31 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 52 ರನ್ ಬಾರಿಸಿದರು.
ಈ ಅರ್ಧಶತಕದ ನೆರವಿನಿಂದ ಸಿಡ್ನಿ ಸಿಕ್ಸರ್ಸ್ ತಂಡವು 19.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 3 ವಿಕೆಟ್ಗಳ ಜಯ ಸಾಧಿಸಿತು. ಇದೀಗ ಸ್ಟೀವ್ ಸ್ಮಿತ್ ಅವರ ಸೂಪರ್ ಸೇವ್ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಆಸ್ಟ್ರೇಲಿಯಾ ದಾಂಡಿಗನ ಟೈಮಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.