ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿಗೆ ಕಲ್ಲೆಸೆತ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ್ ರಾಯರೆಡ್ಡಿ ಭಾಷಣ ಮಾಡುವಾಗ ಅವರತ್ತ ಕಲ್ಲೆಸೆಯಲಾಗಿದೆ. ಅದೃಷ್ಟವಶಾತ್ ಕಲ್ಲು ಅವರಿಗೆ ತಗುಲಿಲ್ಲ, ಬದಲಿಗೆ ಅವರ ಮುಂದೆಯೇ ಬಿತ್ತು. ಪರಿಶೀಲನೆಯ ನಂತರ, ಕೃತ್ಯವೆಸಗಿದ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಗೊಂದಲ ಸೃಷ್ಟಿಯಾಯಿತು.
ಕೊಪ್ಪಳ, ಜನವರಿ 26: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಭಾನುವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರತ್ತ ಕಲ್ಲೆಸೆಯಲಾಗಿದೆ. ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಜನಗಳ ಸಮಸ್ಯೆ ಆಲಿಸಲು ಶಾಸಕರು ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ್ ರಾಯರೆಡ್ಡಿ ಭಾಷಣ ಮಾಡುತ್ತಿದ್ದಾಗ ಅವರ ಮುಂದೆಯೇ ಒಂದು ಕಲ್ಲು ಬಿದ್ದಿದೆ.
ಈ ಅನಿರೀಕ್ಷಿತ ಘಟನೆಯಿಂದಾಗಿ ಶಾಸಕ ಬಸವರಾಜ್ ರಾಯರೆಡ್ಡಿ ಕೆಲಕಾಲ ಗಾಬರಿಗೊಂಡರು. ಅಲ್ಲಿದ್ದ ಜನರೂ ಕೂಡಾ ಆತಂಕಗೊಂಡರು. ತಕ್ಷಣದ ಪರಿಶೀಲನೆಯ ನಂತರ, ಕಲ್ಲೆಸೆದ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ. ಅದೃಷ್ಟವಶಾತ್ ಶಾಸಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನಸಂಪರ್ಕ ಕಾರ್ಯಕ್ರಮ ಸಸೂತ್ರವಾಗಿ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
