ಲಸಿಕಾ ಆಭಿಯಾನ: ಇವತ್ತಿಲ್ಲ ನಾಳಿಗ್ ಸಾಯಾಕಿ ನಾನು, ನಂಗ್ಯಾಕಾ ಸೂಜಿ, ಹೋಗ್ ಅಕ್ಕಡಿ, ಅಂದಳು ಮಡಕೇಶ್ವರದ ಅಜ್ಜಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 18, 2021 | 9:51 PM

ಆಕೆಯ ಹಟದೆದುರು ಕಾರ್ಯಕರ್ತರು ಅಸಹಾಯಕರಾಗಿ ಬಿಟ್ಟಿದ್ದಾರೆ, ಹತಾಷೆಯ ನಗೆ ಬೀರುತ್ತಿದ್ದಾರೆ. ಅಜ್ಜಿಯ ಹಟ ಅವರಿಗೆ ಮನರಂಜನೆ ಒದಗಿಸುತ್ತಿರುವುದು ಸುಳ್ಳಲ್ಲ. ಕೊನೆಗೆ ಅವರು ಆಕೆಯ ಹಟದೆದುರು ಸೋಲಲೇಬೇಕಾಯಿತು.

ನಿಮಗೆ ನೆನೆಪಿರಬಹುದು. ಲಸಿಕಾ ಅಭಿಯಾನದಡಿ ಚಾಮರಾಜನಗರದ ಒಂದು ತಾಂಡಾದಲ್ಲಿ ವಾಸವಾಗಿರುವ ಜನ ಆರೋಗ್ಯ ಕಾರ್ಯಕರ್ತರನ್ನು ನೋಡಿದ ಕೂಡಲೇ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಹೊರಗೋಡಿದರು. ಆಗ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಉಸ್ತು ಸಚಿವರೂ ಆಗಿದ್ದರು. ಅಂದು ಅರೋಗ್ಯ ಕಾರ್ಯಕರ್ತರೊಂದಿಗೆ ಸಚಿವರೂ ಇದ್ದರು. ಕೊನೆಗೆ ಅವರೇ ಪ್ರಯಾಸಪಟ್ಟು ಆ ತಾಂಡಾದ ಜನರಿಗೆ ಲಸಿಕೆ ತೆಗೆದುಕೊಳ್ಳುವಂತೆ ಮನವರಿಕೆ ಮಾಡಿದ್ದರು.

ಅಂಥದ್ದೇ ಒಂದು ಪ್ರಸಂಗ ಈ ವಿಡಿಯೋನಲ್ಲೂ ನೀವು ನೋಡಬಹುದು. ಅಂದಹಾಗೆ, ಇದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮಡಕೇಶ್ವರ ಹೆಸರಿನ ಊರಲ್ಲಿ ನಡೆದ ಘಟನೆ. ನೀವು ನೋಡುತ್ತಿರುವ ಹಾಗೆ ಆರೋಗ್ಯ ಕಾರ್ಯಕರ್ತರು ಒಬ್ಬ ಅಜ್ಜಿಗೆ ಲಸಿಕೆ ಹಾಕಿಸಿಕೊಳ್ಳಲು ತಮ್ಮೊಂದಿಗೆ ಬರುವಂತೆ ಹೇಳುತ್ತಿದ್ದಾರೆ. ಆದರೆ ಅಜ್ಜಿ ಮಾತ್ರ ಅದಕ್ಕೆ ಜಪ್ಪಯ್ಯ ಅಂದರೂ ಒಪ್ಪುತ್ತಿಲ್ಲ. ನಂಗೆ ವಯಸ್ಸಾಗಿದೆ, ನಂದೆಲ್ಲ ಮುಗಿದಿದೆ, ಸಾವಿಗೆ ಹತ್ತಿರವಾಗಿದ್ದೀನಿ, ನಂಗ್ಯಾಕೆ ಲಸಿಕೆ ಅಂತ ಆಕೆ ಹೇಳುತ್ತಿದ್ದಾಳೆ. ಆದರೆ, ಕಾರ್ಯಕರ್ತರು ಆಕೆಗೆ ಬಲವಂತ ಮಾಡುತ್ತಲೇ ಇದ್ದಾರೆ. ಆದರೆ ಅಜ್ಜಿ ಮಾತ್ರ ಸ್ಥಳ ಬಿಟ್ಟು ಕದಲಲು ತಯಾರಿಲ್ಲ.

ಆಕೆಯ ಹಟದೆದುರು ಕಾರ್ಯಕರ್ತರು ಅಸಹಾಯಕರಾಗಿ ಬಿಟ್ಟಿದ್ದಾರೆ, ಹತಾಷೆಯ ನಗೆ ಬೀರುತ್ತಿದ್ದಾರೆ. ಅಜ್ಜಿಯ ಹಟ ಅವರಿಗೆ ಮನರಂಜನೆ ಒದಗಿಸುತ್ತಿರುವುದು ಸುಳ್ಳಲ್ಲ. ಕೊನೆಗೆ ಅವರು ಆಕೆಯ ಹಟದೆದುರು ಸೋಲಲೇಬೇಕಾಯಿತು.

ಅಸಲಿಗೆ ನಮ್ಮ ದೇಶದ ನಾನಾ ರಾಜ್ಯಗಳಲ್ಲಿನ ಹಳ್ಳಿಗಳಲ್ಲಿ ಕಂಡು ಬರುವ ನೈಜ ಚಿತ್ರಣವಿದು. ಅನಕ್ಷರಸ್ಥ ವಯಸ್ಕರಿಗೆ ಲಸಿಕೆಯ ಪ್ರಯೋಜನದ ಬಗ್ಗೆ ಮನವರಿಕೆ ಮಾಡುವುದು ಆರೋಗ್ಯ ಕಾರ್ಯಕರ್ತರಿಗೆ ಬಹಳ ಕಷ್ಟವಾಗುತ್ತಿದೆ, ಕೆಲವು ಕಡೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಸಂಗಗಳೂ ಇವೆ.

ಇದನ್ನೂ ಓದಿ:  ರೈಲಿನಲ್ಲಿ ಡೋಲಕ್ ನುಡಿಸುತ್ತಾ ಪ್ರಯಾಣಿಕರನ್ನು ರಂಜಿಸಿದ ಪುಟ್ಟ ಬಾಲಕ; ನೆಟ್ಟಿಗರು ಮೆಚ್ಚಿದ ವಿಡಿಯೋವಿದು