ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಛಾತಿ ಇಲ್ಲದಿದ್ದರೆ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಉತ್ತಮ
ತಪ್ಪು ಕೊಹ್ಲಿಯದ್ದಾಗಿರಲಿ ಅಥವಾ ಶರ್ಮ, ತಪ್ಪು ತಪ್ಪೇ. ಅವರಿಬ್ಬರೂ ಟೀಮಿಗಿಂತ ದೊಡ್ಡವರಲ್ಲ. ಸೌರವ್ ಗಂಗೂಲಿ ಟೀಮ್ ಇಂಡಿಯಾದ ನಾಯಕರಾಗಿದ್ದಾಗ ಭಾರಿ ದಿಟ್ಟತನ ತೋರುತ್ತಿದ್ದರು. ಆದರೆ, ಆಗಿನ ಗಂಗೂಲಿ ಮತ್ತು ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಧ್ಯೆ ಬಹಳ ವ್ಯತ್ಯಾಸವಿದೆ.
ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಭಾರತೀಯ ಕ್ರಿಕೆಟ್ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋ ಅಂಶ ಸ್ಪಷ್ಟವಾಗುತ್ತದೆ. ಹೌದು, ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಮುಗಿದ ನಂತರ ಈ ಅತಿ ಕಿರು ಅವೃತ್ತಿಯ ನಾಯಕತ್ವನ್ನು ಬಿಟ್ಟು ಕೊಡುವ ಬಗ್ಗೆ ಹಠಾತ್ತನೆ ನಿರ್ಧಾರ ಪ್ರಕಟಿಸಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿ ಇದನ್ನು 6 ತಿಂಗಳುಗಳಿಂದ ನಡೆಯುತ್ತಿದ್ದ ಪ್ಲ್ಯಾನಿಂಗ್ ಅಂತ ಹೇಳಿ ಮಾಧ್ಯಮದವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ. ಇದು ಅಷ್ಟು ಸಮಯದ ಯೋಜನೆಯಾಗಿದ್ದರೆ ಮುಚ್ಚಿಡುವ ಅವಶ್ಯಕತೆ ಏನಿತ್ತು?
ಕೊಹ್ಲಿ ಮತ್ತು ಸೀಮಿತ ಓವರ್ ಗಳ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿರುವ ರೊಹಿತ್ ಶರ್ಮ ನಡುವಿನ ಸಂಬಂಧ ಅಷ್ಟಕಷ್ಟೆ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಡ್ರೆಸಿಂಗ್ ರೂಮಿನಲ್ಲಿ ಒಂದಷ್ಟು ಆಟಗಾರರು ಶರ್ಮ ಹಿಂದೆ ಸುತ್ತುತ್ತಾರೆ ಅಂತ ಹೇಳಲಾಗುತ್ತಿದೆ. ಇದು ನಿಜವೇ ಆಗಿದ್ದರೆ ಟೀಮ್ ಇಂಡಿಯಾನಲ್ಲಿ ಗುಂಪುಗಾರಿಕೆ ಶುರುವಾಗಿದೆ ಅಂತರ್ಥ.
ಇದು ತಂಡದ ಮ್ಯಾನೇಜರ್, ಹೆಡ್ ಕೋಚ್ ಮತ್ತು ಇತರ ಆಡಳಿತಾತ್ಮಕ ಸ್ಟಾಫ್ನವರಿಗೆ ಗೊತ್ತಿರುತ್ತದೆ. ಹಾಗಿದ್ದಲ್ಲಿ ವಿಷಯವನ್ನು ಅವರು ಮಂಡಳಿಯ ಗಮನಕ್ಕೆ ಯಾಕೆ ತಂದಿಲ್ಲ? ತಪ್ಪು ಕೊಹ್ಲಿಯದ್ದಾಗಿರಲಿ ಅಥವಾ ಶರ್ಮ, ತಪ್ಪು ತಪ್ಪೇ. ಅವರಿಬ್ಬರೂ ಟೀಮಿಗಿಂತ ದೊಡ್ಡವರಲ್ಲ. ಸೌರವ್ ಗಂಗೂಲಿ ಟೀಮ್ ಇಂಡಿಯಾದ ನಾಯಕರಾಗಿದ್ದಾಗ ಭಾರಿ ದಿಟ್ಟತನ ತೋರುತ್ತಿದ್ದರು. ಆದರೆ, ಆಗಿನ ಗಂಗೂಲಿ ಮತ್ತು ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಧ್ಯೆ ಬಹಳ ವ್ಯತ್ಯಾಸವಿದೆ.
ಮೊನ್ನೆ, ರವಿಶಾಸ್ತ್ರೀ ಕೇಸನ್ನು ಗಂಗೂಲಿ ನಿರ್ವಹಿಸಿದ ರೀತಿಯನ್ನು ಗಮನಿಸಿ. ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ನಡೆಯುತ್ತಿದ್ದಾಗ ಈಯಪ್ಪ (ಶಾಸ್ತ್ರೀ) ಮಂಡಳಿಯ ಅನುಮತಿಯಿಲ್ಲದೆ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗಿದ್ದರು.
ಇದು ನಿಸ್ಸಂದೇಹವಾಗಿ ತಪ್ಪು, ತಪ್ಪು ಮಾತ್ರವಲ್ಲ ಅಪರಾಧವೂ ಹೌದು! ಆದರೆ, ಗಂಗೂಲಿ ಅವರು ಶಾಸ್ತ್ರೀಯನ್ನು ವಹಿಸಿಕೊಂಡು ಮಾತಾಡಿದ್ದು ಆಘಾತಕಾರಿ ಅಂಶ. ಇದು ಅದಕ್ಕೂ ದೊಡ್ಡ ಅಪರಾಧ!! ಶಾಸ್ತ್ರೀ ಅನುಮತಿ ಪಡೆಯದೆ ಹೋಗಿದ್ದಕ್ಕೆ ಕ್ರಮ ತೆಗೆದುಕೊಳ್ಳುತ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಗಂಗೂಲಿ ಕೊಟ್ಟ ಉತ್ತರವೇನು ಗೊತ್ತಾ? ಎಷ್ಟು ದಿನ ಅಂತ ಬಯೋ ಬಬಲ್ ನಲ್ಲಿ ಇರೋದಿಕ್ಕೆ ಸಾಧ್ಯ? ಅವರು ಹೋಗಿದ್ದು ತಪ್ಪಲ್ಲ!
ಹಾರ್ಟ್ ಆಪರೇಶನ್ ಆದಾಗಿನಿಂದ ಗಂಗೂಲಿ ಪುಕ್ಕಲು ಸ್ವಭಾವದವರಾಗಿದ್ದಾರೆಯೇ? ಈ ಸನ್ನಿವೇಶ ಅದನ್ನೇ ಸೂಚಿಸುತ್ತದೆ.
ಕೊನೆಯ ಟೆಸ್ಟ್ ರದ್ದಾಗಿದ್ದು ಶಾಸ್ತ್ರೀಯಿಂದಲೇ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕೇ? ಅದುವರೆಗೆ ಭಾರತದ ಶಿಬಿರದಲ್ಲಿ ಎಲ್ಲವೂ ಸರಿಯಾಗಿತ್ತು. ಶಾಸ್ತ್ರೀ ತಮ್ಮ ಸೋಂಕನ್ನು ಸಪೋರ್ಟ್ ಸ್ಟಾಫ್ನವರಿಗೂ ತಾಕಿಸಿದರು. ಭೀತಿಗೊಳಗಾದ ಟೀಮ್ ಇಂಡಿಯಾ ಸದಸ್ಯರು ಕೊನೆಯ ಟೆಸ್ಟ್ ಆಡುವುದಿಲ್ಲ ಅಂತ ಪಟ್ಟು ಹಿಡಿದರು. ಯಾರ ಬಾಯಿಂದಲೂ ಹೆಡ್ ಕೋಚ್ ವಿರುದ್ಧ ಒಂದೇ ಒಂದು ಶಬ್ದ ಬರಲಿಲ್ಲ.
ಆದರೆ ಇಂಗ್ಲೆಂಡ್ ಆಟಗಾರರು ಮತ್ತು ಈಸಿಬಿ ಟೀಮ್ ಇಂಡಿಯ ವರಸೆ ವಿರುದ್ಧ ಮನಸ್ಸಿಗೆ ಬಂದಂತೆ ಮಾತಾಡಿದರು. ಇತರ ಕ್ರಿಕೆಟಿಂಗ್ ರಾಷ್ಟ್ರಗಳು ಸಹ ಬೇಸರ ವ್ಯಕ್ತಪಡಿಸಿದವು.
ಇದು ಭಾರತೀಯ ಕ್ರಿಕೆಟ್ ಗೆ ಬೇಕಿರಲಿಲ್ಲ. ಕ್ರೀಡೆಯು ಶಾಸ್ತ್ರೀ, ಕೊಹ್ಲಿ, ಶರ್ಮ, ಗಂಗೂಲಿ ಮೊದಲಾದವರಿಗಿಂತ ಬಹಳ ದೊಡ್ಡದು.
ಇದನ್ನೂ ಓದಿ: ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ, ವಿಡಿಯೋ ವೈರಲ್