ಫಿಲ್ ಸಾಲ್ಟ್ ‘ಕ್ಯಾಚ್’ ಬಗ್ಗೆ ಸುನಿಲ್ ಗವಾಸ್ಕರ್ ಅಪಸ್ವರ
IPL 2026 RCB vs SRH: ಐಪಿಎಲ್ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಆರ್ಸಿಬಿ ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಸಾಲ್ಟ್ ಬೌಂಡರಿ ಲೈನ್ನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ತೀರ್ಪಿನ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.
ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡದ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ನೀಡಿದ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಫಿಲ್ ಸಾಲ್ಟ್ ಹಿಡಿದರು. ಈ ಸಮಯದಲ್ಲಿ ಸಾಲ್ಟ್ ಅವರ ಕಾಲು ಅಥವಾ ದೇಹ ಬೌಂಡರಿ ಹಗ್ಗಕ್ಕೆ ತಗುಲಿದೆಯೇ ಎಂಬ ಗೊಂದಲ ಸೃಷ್ಟಿಯಾಯಿತು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಇತ್ತ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಅಸಮಾಧಾನ ಹೊರಹಾಕಿದ್ದರು. ಏಕೆಂದರೆ ಕ್ಯಾಚ್ ಹಿಡಿಯುವ ಭರದಲ್ಲಿ ಫಿಲ್ ಸಾಲ್ಟ್ ಅವರ ದೇಹ ಬೌಂಡರಿ ಹಗ್ಗಕ್ಕೆ ತಗುಲಿದಂತೆ ಕಾಣುತ್ತಿದೆ ಮತ್ತು ಹಗ್ಗ ಸ್ವಲ್ಪ ಸರಿದಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು.
ರೀಪ್ಲೇಗಳನ್ನು ನೋಡುವಾಗ ಕೆಲವು ಕೋನಗಳಿಂದ ಇದು ಔಟ್ ಎಂದು ಕಂಡರೂ, ಇನ್ನು ಕೆಲವು ಕಡೆಯಿಂದ ಹಗ್ಗ ಸರಿದಿರುವುದು ಸ್ಪಷ್ಟವಾಗಿತ್ತು. ಗವಾಸ್ಕರ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, “ಇದು ಕ್ಲೀನ್ ಕ್ಯಾಚ್ ಹೌದೇ ಎಂಬ ಬಗ್ಗೆ ಅನುಮಾನವಿದೆ” ಎಂದರು.
ಅಲ್ಲದೆ, ಮೂರನೇ ಅಂಪೈರ್ ಕ್ಲಾಸೆನ್ ಅವರ ಕ್ಯಾಚನ್ನು ವಿವಿಧ ಕೋನಗಳಿಂದ ಪರಿಶೀಲಿಸಲು ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಿತ್ತು. ಫಿಲ್ ಸಾಲ್ಟ್ ಅವರು ಬೌಂಡರಿಯನ್ನು ಸ್ಪರ್ಶಿಸಿರುವಂತೆ ಕಂಡುಬರುತ್ತಿತ್ತು. ಇಂತಹ ಸಂದೇಹಾಸ್ಪದ ಸಂದರ್ಭಗಳಲ್ಲಿ, ಇದರ ಲಾಭವು ಬ್ಯಾಟರ್‌ಗೆ ಸಿಗಬೇಕಿತ್ತು. ಆದರೆ ಮೂರನೇ ಅಂಪೈರ್ ಸರಿಯಾಗಿ ಪರಿಶೀಲಿಸದೇ ಬೇಗನೆ ಔಟ್ ನೀಡಿರುವುದು ತಪ್ಪು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತ ಮೂರನೇ ಅಂಪೈರ್ ರೋಹನ್ ಪಂಡಿತ್ ಅವರು ಲಭ್ಯವಿರುವ ದೃಶ್ಯಗಳನ್ನು ಪರಿಶೀಲಿಸಿ ಅದು ‘ಔಟ್’ ಎಂದು ತೀರ್ಪು ನೀಡುತ್ತಿದ್ದಂತೆ ಹೆನ್ರಿಕ್ ಕ್ಲಾಸೆನ್ ಮೈದಾನದಲ್ಲೇ ಕೋಪಗೊಂಡು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಕ್ಯಾಚ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆದಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಇಶಾನ್ ಕಿಶನ್ (8) ಅವರ ಅರ್ಧಶತಕದ ನೆರವಿನೊಂದಿಗೆ 20 ಓವರ್ಗಳಲ್ಲಿ 201 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಆರ್ಸಿಬಿ ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.

