ನೀವು ಕ್ರಿಕೆಟ್ ಅನ್ನು ರಾಜಕೀಯಗೊಳಿಸಿದ ನಾಯಕ: ಸೂರ್ಯನ ಉತ್ತರ ಹೀಗಿದೆ..!
India vs Pakistan Asia Cup 2025: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 9ನೇ ಬಾರಿ ಏಷ್ಯನ್ ಚಾಂಪಿಯನ್ ಎನಿಸಿಕೊಂಡಿದೆ.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ 150 ರನ್ಗಳಿಸಿ 5 ವಿಕೆಟ್ಗಳ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ ಪಾಕಿಸ್ತಾನಿ ಪತ್ರಕರ್ತ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳನ್ನು ಪ್ರಬುದ್ಧತೆಯಿಂದ ನಿಭಾಯಿಸುವ ಮೂಲಕ ಸೂರ್ಯಕುಮಾರ್ ಯಾದವ್ ಗಮನ ಸೆಳೆದಿದ್ದಾರೆ.
ನೀವು ಚಾಂಪಿಯನ್ ಆಗಿದ್ದೀರಿ. ನಿಮ್ಮ ತಂಡ ಉತ್ತಮವಾಗಿ ಆಡಿದೆ. ಆದರೆ ಪ್ರಶ್ನೆ ಏನೆಂದರೆ, ಇಡೀ ಟೂರ್ನಿಯಲ್ಲಿ ನಿಮ್ಮ ವರ್ತನೆಯು ಭಿನ್ನವಾಗಿತ್ತು. ನೀವು ಪಾಕಿಸ್ತಾನ್ ತಂಡದೊಂದಿಗೆ ಹ್ಯಾಂಡ್ ಶೇಕ್ ಮಾಡಿಲ್ಲ. ಟ್ರೋಫಿ ಜೊತೆ ಫೋಟೋ ಸೆಷನ್ ಮಾಡಿಲ್ಲ. ಆ ಬಳಿಕ ನೀವು ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ವಿಷಯಗಳನ್ನು ಹೇಳಿದ್ದೀರಿ. ಕ್ರಿಕೆಟ್‌ಗೆ ರಾಜಕೀಯವನ್ನು ತಂದ ಮೊದಲ ನಾಯಕ ನೀವು ಎಂದು ನೀವು ಭಾವಿಸುವುದಿಲ್ಲವೇ? ಎಂದು ಪಾಕ್ ಪತ್ರಕರ್ತ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಮೊದಲು ಮುಗುಳ್ನಕ್ಕ ಸೂರ್ಯಕುಮಾರ್ ಯಾದವ್, ನೀವು ಕೋಪಗೊಳ್ಳುತ್ತಿದ್ದೀರಿ ಪಾಕ್ ಪತ್ರಕರ್ತನನ್ನು ಛೇಡಿಸಿದರು. ಆ ಬಳಿಕ ನಗುತ್ತಾ ನಿಮ್ಮ ಪ್ರಶ್ನೆಗಳೇ ಅರ್ಥವಾಗಿಲ್ಲ. ಒಂದೇ ಬಾರಿ 4 ಪ್ರಶ್ನೆಗಳನ್ನು ಕೇಳಿದ್ದೀರಿ ಎಂದು ಕಾಲೆಳೆದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.