ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್

Updated on: Feb 05, 2026 | 10:18 AM

India T20 World Cup 2026: ಮೂರನೇ ಕ್ರಮಾಂಕದಲ್ಲಿ 4 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಇಶಾನ್ ಕಿಶನ್ ಕ್ರಮವಾಗಿ 8, 76, 28 ಮತ್ತು 103 ರನ್​ಗಳ ಇನಿಂಗ್ಸ್ ಆಡಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ತಿಲಕ್ ವರ್ಮಾ ಮೂರನೇ ಕ್ರಮಾಂಕಕ್ಕೆ ಆಗಮಿಸಿದ್ದಾರೆ.

ಟಿ20 ವಿಶ್ವಕಪ್ 2026 ರಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಅದು ಕೂಡ ವಿಶ್ವಕಪ್ ಆರಂಭಕ್ಕೆ ಕೇವಲ 2 ದಿನಗಳಿರುವಾಗ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್​ಗೆ ಓಪನರ್​ಗಳು ಯಾರು ಎಂಬ ಪ್ರಶ್ನೆ ಮುಂದಿಡಲಾಗಿತ್ತು.

ಈ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ನೀಡಿದ ಉತ್ತರ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದ್ದರು. ಈ ವೇಳೆ ಇಶಾನ್ ಕೇವಲ 20 ಎಸೆತಗಳಲ್ಲಿ 53 ರನ್ ಚಚ್ಚುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದರೊಂದಿಗೆ ಈ ಬಾರಿಯ ವಿಶ್ವಕಪ್​ನಲ್ಲೂ ಸಂಜು ಸ್ಯಾಮ್ಸನ್ ಬೆಂಚ್ ಕಾಯುವುದು ಖಚಿತವಾಗಿದೆ. ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸ್ಯಾಮ್ಸನ್ ಕಲೆಹಾಕಿದ್ದು ಕೇವಲ 46 ರನ್​ಗಳು ಮಾತ್ರ.

ಇದೇ ವೇಳೆ ಮೂರನೇ ಕ್ರಮಾಂಕದಲ್ಲಿ 4 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಇಶಾನ್ ಕಿಶನ್ ಕ್ರಮವಾಗಿ 8, 76, 28 ಮತ್ತು 103 ರನ್​ಗಳ ಇನಿಂಗ್ಸ್ ಆಡಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ತಿಲಕ್ ವರ್ಮಾ ಮೂರನೇ ಕ್ರಮಾಂಕಕ್ಕೆ ಆಗಮಿಸಿದ್ದಾರೆ.

ಹೀಗಾಗಿಯೇ ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ಇಶಾನ್ ಕಿಶನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಅದರಂತೆ ಫೆಬ್ರವರಿ 7 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ನಲ್ಲಿ ಭಾರತದ ಪರ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ. ಅತ್ತ ಕಳೆದ ಟಿ20 ವಿಶ್ವಕಪ್​ನಲ್ಲಿ ಬೆಂಚ್ ಕಾದಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಕೂಡ ಬೆಂಚ್ ಕಾಯುವ ಸಾಧ್ಯತೆ ಹೆಚ್ಚಿದೆ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published on: Feb 05, 2026 10:11 AM