ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್ನಿಂದ ಗಿಫ್ಟ್ ಕೂಪನ್, ಹಣ ಹಂಚಿಕೆ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗಿಫ್ಟ್ ಕೂಪನ್, ಫ್ಲಾಸ್ಕ್, ಟಿಫಿನ್ ಬಾಕ್ಸ್ ಮತ್ತು ಹಣ ಹಂಚುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬಿಇಒಗಳ ಮೂಲಕ ಈ ಚಟುವಟಿಕೆ ನಡೆಯುತ್ತಿದೆ ಎಂದು ದೂರಿದ ಅವರು, ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 22: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗಿಫ್ಟ್ ಕೂಪನ್, ಫ್ಲಾಸ್ಕ್, ಟಿಫಿನ್ ಬಾಕ್ಸ್ ಮತ್ತು ಹಣವನ್ನು ಹಂಚುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಪುಟ್ಟಣ್ಣರಿಂದ ದಸರಾ ಹಬ್ಬದ ಶುಭಾಶಯಗಳು ಎನ್ನುವ ಗಿಫ್ಟ್ ಕೂಪನ್ ಕಾರ್ಡ್ ಹಂಚಲಾಗಿದೆ. ಈ ಗಿಫ್ಟ್ ಕಾರ್ಡ್ಗಳನ್ನು ಕೊಟ್ಟು ಲುಲು ಮಾಲ್ನಲ್ಲಿ ವಸ್ತು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಬಿಇಒಗಳ ಮೂಲಕ ಗಿಫ್ಟ್ ಕೂಪನ್ ಹಂಚುವ ಕೆಲಸ ನಡೆಯುತ್ತಿದ್ದು, ಹಣದ ಆಮಿಷ ಒಡ್ಡುವ ಕೆಲಸವೂ ನಡೆಯುತ್ತಿದೆ. ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಈ ರೀತಿಯಲ್ಲಿ ನೀವು ಶಾಸಕರಾಗಬೇಕಾ? ಕಾಂಗ್ರೆಸ್ನವರು ಇದಕ್ಕೆ ಉತ್ತರಿಸಬೇಕಿದೆ. ಇದು ವೋಟ್ ಚೋರಿ ಅಲ್ಲ ಅಂತಾ ಹೇಳಿ ನೋಡೋಣ ಎಂದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಜೊತೆ ಶಾಮೀಲಾಗಿರುವ ಬಿಇಒಗಳ ಫೋಟೋ ಬಿಡುಗಡೆ ಮಾಡುತ್ತೇವೆ ಎಂದೂ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
