IND vs AUS: ಕನ್ನಡಿಗ ದೇವದತ್ ಪಡಿಕ್ಕಲ್ ಆಡುವುದು ಖಚಿತ; ಮಹತ್ವದ ಸುಳಿವು ನೀಡಿದ ಬಿಸಿಸಿಐ

IND vs AUS: ಕನ್ನಡಿಗ ದೇವದತ್ ಪಡಿಕ್ಕಲ್ ಆಡುವುದು ಖಚಿತ; ಮಹತ್ವದ ಸುಳಿವು ನೀಡಿದ ಬಿಸಿಸಿಐ

ಪೃಥ್ವಿಶಂಕರ
|

Updated on:Nov 21, 2024 | 4:44 PM

Devadatt Padikkal: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರಿಗೆ ಅವಕಾಶ ನೀಡಲಾಗಿದೆ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಗಾಯಗೊಂಡಿರುವುದರಿಂದ ಈ ಆಯ್ಕೆ ಮಾಡಲಾಗಿದೆ. ಪಡಿಕ್ಕಲ್ ಅವರು ಪರ್ತ್ ಟೆಸ್ಟ್‌ನಲ್ಲಿ ಆಡುವ 11ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯು ನಾಳೆಯಿಂದ, ಅಂದರೆ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತ ತಂಡದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಅವಕಾಶ ನೀಡಿದೆ. ವಾಸ್ತವವಾಗಿ, ತಂಡದ ನಾಯಕ ರೋಹಿತ್ ಶರ್ಮಾ ಸರಣಿಯ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಜೊತೆಗೆ ಶುಭ್​ಮನ್ ಗಿಲ್ ಕೂಡ ಗಾಯಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ದೇವದತ್ ಪಡಿಕ್ಕಲ್ ತಂಡದಲ್ಲಿ ಸ್ಥಾನ ಪಡೆದಿದ್ದು, ಆಡುವ 11ರಲ್ಲೂ ಅವಕಾಶ ಪಡೆಯುವ ಸಾಧ್ಯತೆಗಳಿವೆ.

ಟೀಂ ಇಂಡಿಯಾದಲ್ಲಿ ಬದಲಾವಣೆ

ಪರ್ತ್ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಂ ಇಂಡಿಯಾ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ದೇವದತ್ ಪಡಿಕ್ಕಲ್ ಬಗ್ಗೆ ಮಾಹಿತಿ ನೀಡಿದೆ. ಈ ಹಿಂದೆ ಭಾರತ ಎ ತಂಡದ ಭಾಗವಾಗಿ ಆಸ್ಟ್ರೇಲಿಯಾ ಎ ವಿರುದ್ಧ ಕಣಕ್ಕಿಳಿದಿದ್ದ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದರು. ಈ ವೇಳೆ ಗಿಲ್ ಇಂಜುರಿಗೊಂಡ ಕಾರಣ ಅವರನ್ನು ಭಾರತ ತಂಡದಲ್ಲೇ ಆಸ್ಟ್ರೇಲಿಯಾದಲ್ಲಿ ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ದೇವದತ್ ಪಡಿಕ್ಕಲ್​ಗೆ ಪರ್ತ್ ಟೆಸ್ಟ್​ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗಲಿದ್ದು, ಅವರು 3 ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ.

ಪಡಿಕ್ಕಲ್ ವೃತ್ತಿಜೀವನ

ಈ ವರ್ಷ ಇಂಗ್ಲೆಂಡ್ ಸರಣಿಯಲ್ಲಿ ದೇವದತ್ ಪಡಿಕ್ಕಲ್ ಅವರು ಟೀಂ ಇಂಡಿಯಾ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅವರು 65 ರನ್‌ಗಳ ಇನಿಂಗ್ಸ್‌ ಆಡಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ-ಎ ವಿರುದ್ಧದ ಎರಡು ಪಂದ್ಯಗಳಲ್ಲಿ, ಅವರು 36, 88, 26 ಮತ್ತು ಒಂದು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಇದಲ್ಲದೇ ಅಗ್ರ ಕ್ರಮಾಂಕದಲ್ಲಿ ಆಡಿದ ಅನುಭವ ಪಡಿಕ್ಕಲ್ ಅವರಿಗಿದೆ. ಪಡಿಕ್ಕಲ್ ಅವರು ಇಲ್ಲಿಯವರೆಗೆ 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 42.49 ರ ಸರಾಸರಿಯಲ್ಲಿ 2677 ರನ್ ಗಳಿಸಿದ್ದಾರೆ. ಇದರಲ್ಲಿ 17 ಅರ್ಧ ಶತಕಗಳು ಮತ್ತು 6 ಶತಕಗಳು ಸೇರಿವೆ.

ಪರ್ತ್ ಟೆಸ್ಟ್‌ಗೆ ಟೀಂ ಇಂಡಿಯಾ: ಜಸ್ಪ್ರೀತ್ ಬುಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಸಿಡೇಜಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 21, 2024 04:34 PM