2025 ರ ಏಷ್ಯಾಕಪ್ ಗೆದ್ದಿರುವ ಟೀಂ ಇಂಡಿಯಾ ಸಂತಸದ ಅಲೆಯಲ್ಲಿ ತೇಲುತ್ತಿದೆ. ಅದರಲ್ಲೂ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿರುವುದು ಇಡೀ ಭಾರತದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದೆ. ತಂಡದ ಈ ಗೆಲುವಿನಲ್ಲಿ ಎಲ್ಲಾ ಆಟಗಾರರ ಪ್ರದರ್ಶನ ಪ್ರಮುಖವಾಗಿತ್ತು. ಅದರಲ್ಲೂ ತಂಡ ಸಂಕಷ್ಟದಲ್ಲಿದ್ದಾಗ ಒತ್ತಡವನ್ನು ನಿಯಂತ್ರಿಸಿಕೊಂಡು ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ತಿಲಕ್ ವರ್ಮಾ ಹಾಗೂ ಕೊನೆಯ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ರಿಂಕು ಸಿಂಗ್ಗೆ ವಿಶೇಷ ಮನ್ನಣೆ ಸಿಗಲೇಬೇಕು. ಅಚ್ಚರಿಯ ಸಂಗತಿಯೆಂದರೆ ಟೂರ್ನಿ ಆರಂಭಕ್ಕೂ ಮುನ್ನ ಫೈನಲ್ ಪಂದ್ಯದಲ್ಲಿ ನಾವಿಬ್ಬರು ಯಾವ ರೀತಿಯ ಪ್ರದರ್ಶನ ನೀಡಬೇಕು ಎಂಬುದನ್ನು ಇವರಿಬ್ಬರು ಬರೆದುಕೊಟ್ಟಿದ್ದರು. ಅದರಂತೆ ಫೈನಲ್ ಪಂದ್ಯದಲ್ಲಿ ತಾವು ಬರೆದುಕೊಟ್ಟಿದ್ದನ್ನು ಮೈದಾನದಲ್ಲಿ ಮಾಡಿ ತೋರಿಸಿರಿದ್ದಾರೆ.
ವಾಸ್ತವವಾಗಿ 2025 ರ ಏಷ್ಯಾಕಪ್ ಆರಂಭವಾಗುವ ಮೊದಲು ಅಂದರೆ ನಿಖರವಾಗಿ ಸೆಪ್ಟೆಂಬರ್ 6 ರಂದು ರಿಂಕು ಸಿಂಗ್ ಹಾಗೂ ತಿಲಕ್ ವರ್ಮಾ ಫೈನಲ್ ಪಂದ್ಯದಲ್ಲಿ ತಾವಿಬ್ಬರು ಯಾವ ರೀತಿಯ ಪ್ರದರ್ಶನ ನೀಡಬೇಕು ಎಂಬುದನ್ನು ಒಂದು ಕಾಗದದ ಮೇಲೆ ಬರೆದುಕೊಟ್ಟಿದ್ದರು. ಅದರಲ್ಲಿ ರಿಂಕು ಸಿಂಗ್ ಭಾರತ ತಂಡದ ಗೆಲುವಿನ ರನ್ ಅನ್ನು ನಾನು ಬಾರಿಸಬೇಕು ಎಂದು ಬರೆದಿದ್ದರೆ, ಇತ್ತ ತಿಲಕ್ ವರ್ಮ ಫೈನಲ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವುದಾಗಿ ಬರೆದಿದ್ದರು. ಇದೀಗ ಸೆಪ್ಟೆಂಬರ್ 28 ರಂದು ನಡೆದ ಫೈನಲ್ ಪಂದ್ಯದಲ್ಲಿ ತಾವಿಬ್ಬರು ಏನನ್ನು ಬರೆದುಕೊಟ್ಟಿದ್ದರೋ ಅದನ್ನೇ ಮೈದಾನದಲ್ಲಿ ಮಾಡಿ ತೋರಿಸಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ ರಿಂಕು ಸಿಂಗ್ ಇಡೀ ಟೂರ್ನಿಯಲ್ಲಿ ಆಡಲಿಲ್ಲ. ಆದರೆ, ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರಿಂದ ಅವರಿಗೆ ಫೈನಲ್‌ನಲ್ಲಿ ಆಡುವ ಅವಕಾಶ ದೊರೆಯಿತು. ಆದಾಗ್ಯೂ, ಅವರು ಬ್ಯಾಟಿಂಗ್ ಮಾಡಲು ಬಂದಾಗ ಕೇವಲ ಒಂದು ಎಸೆತ ಮಾತ್ರ ಆಡಿದರು. ಆದರೆ ಆ ಒಂದೇ ಎಸೆತದಲ್ಲಿ ಅವರು ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಗೆಲುವಿನ ರನ್ ಬಾರಿಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಇತ್ತ ತಿಲಕ್ ವರ್ಮಾ 2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದರು. ತಿಲಕ್ ವರ್ಮಾ 53 ಎಸೆತಗಳನ್ನು ಎದುರಿಸಿ ಅಜೇಯ 69 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ